ಲಕ್ಷ್ಮವ್ವ ಅಜ್ಜಿಯ ನೆನಪು

Wednesday, April 23, 2008

ಲಕ್ಷ್ಮವ್ವ ಅಜ್ಜಿ ನಮ್ಮೂರಿನ ನಿರ್ಲಕ್ಷಿತ ಹಿರಿಯರಲ್ಲೊಬ್ಬರು. ಮೂಲತಃ ದೇವದಾಸಿ ಅಜ್ಜಿ. ಹಿರಿಯರು ಮಾಡಿದ ಸಣ್ಣ ತಪ್ಪಿಗಾಗಿ, ಇಡೀ ಜೀವನವನ್ನು ದೇವದಾಸಿಯಾಗಿ ಕಳೆದವಳು. ಅವಳಿಗೆ ಸಂಭಂದಿಕರಿದ್ದಾರೆ, ಆದರೆ ಯಾರೂ ಅವಳ ಬಗ್ಗೆ ಚಿಂತಿಸುವ ಗೋಜಿಗೆ ಹೋಗುವುದಿಲ್ಲ. ಲಕ್ಷ್ಮವ್ವ ಅಜ್ಜಿಯಂತಹ ದೇವದಾಸಿಯರಿಗೆ "ಜೋಗ"ವೇ ಜೀವನದ ಆಧಾರ. ಜೋಗ ಎಂದರೆ ದೇವರ ಹೆಸರಿನಲ್ಲಿ ಹಿಟ್ಟು, ದವಸ ಧಾನ್ಯಗಳಿಗಾಗಿ ಭಿಕ್ಷೆ ಬೇಡುವ ಸಾಂಪ್ರದಾಯಿಕ ಪದ್ಧತಿಗಿರುವ ಮತ್ತೊಂದು ಸೂಕ್ಷ್ಮ ಹೆಸರು. ಹಳ್ಳಿಯಲ್ಲಿ ಕೆಲವರು ಜೋಗತಿ(ದೇವದಾಸಿ)ಯರಿಗೆ ಉದಾರವಾಗಿ ದಾನ ಮಾಡುತ್ತಾರೆ, ಕೆಲವರು ನಿರ್ದಾಕ್ಷಿಣ್ಯವಾಗಿ ’ಮುಂದೆ ಹೋಗು’ ಎನ್ನುತ್ತಾರೆ. ಕೊಡಲು ಇಷ್ಟವಿಲ್ಲವೆಂದಲ್ಲ, ಕೊಡಲು ಏನೂ ಇಲ್ಲದಿರುವುದಕ್ಕಾಗಿ. ಲಕ್ಷ್ಮವ್ವ ಅಜ್ಜಿ ಬಲು ಜಾಣೆ. ಬಂದ ಜೋಗದಲ್ಲಿ ಸ್ವಲ್ಪವಾದರೂ ಉಳಿಸಿ ಜೀವನ ನಡೆಸುವವಳು. ಉಳಿಸುವುದು ತನಗಾಗಿಯಲ್ಲ, ಯಾರಾದರೂ (ನೆಂಟರು) ಅಕಾಸ್ಮಾತಗಿ ಮನೆಗೆ ಬಂದರೆ ಅವರ ಹೊಟ್ಟೆಗಾಗಿ ಮತ್ತು ಕೆಲವೊಮ್ಮೆ ಹಾಸಿಗೆ ಹಿಡಿದು ಜೋಗಕ್ಕೆ ಹೋಗಲು ಆಗದಿದ್ದರೆ ಅಲ್ಪ ಸ್ವಲ್ಪ ಗಂಜಿಗಾಗಿ. ಅವಳಿಗೆ ಜೀವನದಲ್ಲಿ ಯಾವುದೇ ದೊಡ್ಡ ಕನಸುಗಳಿರಲಿಲ್ಲ. ಊರ ಚಿಂತೆ ಮಾಡುವ ಗೋಜಿಗಂತೂ ಮೊದಲೇ ಹೋಗುತ್ತಿರಲಿಲ್ಲ. ಅವಳ ಜೀವನ ತೊಂಬಾ ಸರಳಾವಾದುದು. ಸೂರ್ಯೋದಯಕ್ಕಿಂತ ಮೊದಲೇ ಏಳುವುದು, ಸ್ನಾನದ ನಂತರ ಪೂಜೆ, ಆಮೇಲೆ ದೇವದಾಸಿ ಸಂಗಡಿಗರೊಂದಿಗೆ ಜೋಗಕ್ಕೆ ಹೋಗುವುದು, ಸುಗ್ಗಿಯ ದಿನಗಳಾಗಿದ್ದರೆ ಕೂಲಿ ಕೆಲಸಕ್ಕೆ ಹೋಗುವುದು, ಸಂಜೆ ಅವಳಿಗೆ ಗೊತ್ತಿರುವ ಕೆಲ ಹಿರಿಯರೊಂದಿಗೆ ಹರಟೆ, ಸೂರ್ಯಾಸ್ತದ ನಂತರ ಊಟ, ಕತ್ತಲಾದರೆ ಅವಳಿಗೆ ದೃಷ್ಟಿಯ ತೊಂದರೆ ಇರುವುದರಿಂದ ಬೇಗನೆ ಮಲಗುವುದು, ಇಷ್ಟೆ ಅವಳ ಜೀವನ ಚಕ್ರ. ಬೇರೆ ಊರಿಗೆ ಹೋಗಿ ದಶಕಗಳೆ ಕಳೆದಿರಬೇಕು! ತುಂಬಾ ಸ್ವಾಭಿಮಾನದ ಅಜ್ಜಿ ಅವಳು. ತಾನು ತೀರಿ ಹೋದರೆ ತನ್ನ ಅಂತಿಮ ಸಂಸ್ಕಾರ ಯಾರಿಗೂ ಭಾರವಾಗಬಾರದೆಂದು ನನ್ನ ಕಾಕಾನ ಹತ್ತಿರ ೨೦೦೦/- ರೂಪಾಯಿ ಇಟ್ಟಿದ್ದಳು!

ಅಜ್ಜಿಗೆ ಮಕ್ಕಳಿಲ್ಲ, ನನ್ನನ್ನು ಕಂಡರೆ ಅಪಾರ ಪ್ರೀತಿ ಅವಳಿಗೆ. ನಾನು ಚಿಕ್ಕವನಿದ್ದಾಗ ನನ್ನನ್ನು ಎತ್ತಿ ಆಡಿಸಿದ ಅಜ್ಜಿಯವಳು. ಪ್ರತಿ ಸಲ ಊರಿಗೆ ಹೋದಾಗ, ಲಕ್ಷ್ಮವ್ವ ಅಜ್ಜಿಯನ್ನು ಭೇಟಿಯಾಗುವುದು ನನ್ನ ರೂಡಿ. ಅವಳೊಂದಿಗಿನ ಮಾತು-’ಕಥೆ’ಗಳು ಜೀವನದಲ್ಲಿ ಹಲವಾರು ಪಾಠ ಕಲಿಸಿವೆ. ಅಜ್ಜಿಯ ಜೀವನದ ಶೋಚನೀಯ ಕಥೆ ನನ್ನನ್ನು ಇನ್ನೂ ಅಪಾರ ಚಿಂತೆಗೆ ಗುರಿಪಡಿಸುತ್ತದೆ. ಕೆಲವೊಮ್ಮೆ ಹೀಗೂ ಉಂಟೆ ಅನಿಸುತ್ತದೆ. ತಿಳುವಳಿಕೆ ಬಂದಾಗಿನಿಂದಲೂ ಸ್ವತಃ ಕಷ್ಟಗಳನ್ನು ಅನುಭವಿಸದಿದ್ದರೂ, ಅನುಭವಿಸಿದವರನ್ನು ನೋಡಿದ್ದೇನೆ, ಮಾತನಾಡಿಸಿದ್ದೇನೆ, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಲು ಪ್ರಯತ್ನಿಸಿದ್ದೇನೆ. ಲಕ್ಷ್ಮವ್ವ ಅಜ್ಜಿಯ ಕಷ್ಟ ನೋಡಿ, ಪ್ರತಿ ಬಾರಿ ಊರಿಗೆ ಹೋದಾಗ ಅವಳಿಗೆ ಅಲ್ಪ ಸ್ವಲ್ಪ ದುಡ್ಡು ಕೊಡುತ್ತಿದ್ದೆ. ಪ್ರತಿ ಬಾರಿ ಈ ದುಡ್ಡು ಬೇಡ ಅನ್ನುತ್ತಿದ್ದಳು, "ನಾನು ನಿನ್ನ ನಿಜವಾದ ಮೊಮ್ಮಗನಾದರೆ ಬೇಡ ಅನ್ನುತ್ತಿದ್ದಿಯಾ?" ಅಂತ ಅವಳನ್ನು ಸುಮ್ಮನಾಗಿಸುತ್ತಿದ್ದೆ. ನಾನು ಕೊಟ್ಟಿದ್ದು ಸ್ವಲ್ಪವೇ ಆದರು ಅವಳಿಗೆ ಅದು ಲಕ್ಷಕ್ಕೆ ಸಮವಾಗಿತ್ತು. ಕಳೆದ ಬಾರಿ ಊರಿಗೆ ಹೋದಾಗ, ೩ ದಿನ ಊರಲ್ಲಿದ್ದರೂ ಅತ್ತಿತ್ತ ತಿರುಗಾಡುವುದರಲ್ಲಿಯೇ ತುಂಬಾ ಸಮಯ ಕಳೆಯಿತು. ಕಡೆಯ ದಿನವಾದರೂ ಭೇಟಿಯಾದರಾಯಿತು ಅಂದುಕೊಂಡಿದ್ದೆ. ಊರಿಂದ ಹೊರಡುವಾಗ ಅಜ್ಜಿಯನ್ನು ಭೇಟಿಯಾಗಲು ಅವಳ ಮನೆಯತ್ತ ಹೊರಟೆ, ಅಷ್ಟರಲ್ಲಿ ನನ್ನ ಕಾಕಾ (ಚಿಕ್ಕಪ್ಪ) ಏನೋ urgent ಕೆಲಸ ಅಂತ ಕರೆದ. ಆಮೇಲೆ ಅವಳನ್ನು ಭೇಟಿಯಾಗಲು ಸಾಧ್ಯವೇ ಆಗಲಿಲ್ಲ. ಮಾರನೇ ದಿನ ನಮ್ಮೂರಿನವರೇ ಒಬ್ಬರು, "ಲಕ್ಷ್ಮವ್ವ ಅಜ್ಜಿ ಹಾಸಿಗೆ ಹಿಡಿದಿದ್ದಾರೆ, ನಿನ್ನೆ ನಿನ್ನನ್ನು ಕೇಳುತ್ತಿದ್ದಳು" ಅಂತ ಹೇಳಿದರು. ಅದಾದ ಕೇವಲ ಒಂದೇ ದಿನದ ನಂತರ ಲಕ್ಷ್ಮವ್ವ ಅಜ್ಜಿ ತೀರಿಕೊಂಡರು. ಆವತ್ತು ಭೇಟಿಯಾಗಬೇಕಿತ್ತು ಅಂತ ತುಂಬಾ ದುಃಖಿಸಿದೆ, ಆದರೆ, ವಿಧಿ.....

No comments:

Post a Comment

 

Creative Commons License
This work by Manjunath Singe is licensed under a Creative Commons Attribution-Noncommercial-No Derivative Works 2.5 India License. The views and opinions expressed in this work are strictly those of the author and do not represent his employer's views in anyway.