ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೩

Sunday, January 27, 2008


ಮಧ್ಯಾನ ಊಟವಿಲ್ಲದಿದ್ದರೂ ಜಾತ್ರೆಯಲ್ಲಿ ಕೊಂಡು ತಿಂದ ಸಂಕ್ರಾಂತಿಯ ಕಬ್ಬು ನನ್ನನ್ನು ಮತ್ತಷ್ಟು ಉತ್ಸಾಹಿಯಾಗಿಸಿತ್ತು. ಕಬ್ಬಿನ ರುಚಿಯೇ ಹಾಗಿತ್ತು ಅನ್ನಿ! ಜರ್ಜರಿತವಾಗಿದ್ದ ಜಾತ್ರೆಯ ಜನದಟ್ಟಣೆ ೩ ಗಂಟೆಯ ನಂತರ ಕಡಿಮೆಯಾಗುತ್ತಾ ಬಂತು. ಮತ್ತೆ ಬೆಟ್ಟದತ್ತ ನಮ್ಮ(ನಾನು, ಕಾಕಾ, ಲೋಕನಥ ಸರ್) ಸವಾರಿ. ನನಗಂತು ಜಾತ್ರೆಯ ಪ್ರತಿಯೊಂದು ದೃಶ್ಯವೂ ವಿನೊತನವೆನಿಸುತ್ತಿತ್ತು. ಹೀಗೂ ಉಂಟೆ ಅಂತ!


ಮೈಲಾಪುರದಲ್ಲಿ ಬಸ್ ಸ್ಟ್ಯಾಂಡ್ ಅಂತ ಇಲ್ಲ. ಆದರೆ ಜಾತ್ರೆಯ ಸಮಯದಲ್ಲಿ ಬೆಟ್ಟದ ಪಕ್ಕದಲ್ಲಿನ ಹೊಲಗಳ ಸ್ವಲ್ಪ ಭಾಗ ಬಸ್ ಸ್ಟ್ಯಾಂಡ್ ಆಗಿ ಬಿಡುತ್ತದೆ. ಜನರಿಂದ ತುಂಬಿ ತುಳುಕುವ ಬಸ್ಸುಗಳ ವೈಭವ ಹೇಳತೀರದು. ನಡೆಯುತ್ತಿದ್ದುದ್ದು ದಾರಿಯ ಮೇಲಾದರೂ ನನ್ನ ಕಣ್ಣುಗಳು ಬಸ್ಸಿನ ಮೇಲೆ ಕುಳಿತ ಜನರ ಮೇಲೆ. ಫೋಟೊ ತೆಗೆಯುವ ಚಪಲ ಬೇರೆ. ತುಂಬಿದ ಬಸ್ಸಿನ ಫೋಟೊ ಕ್ಲಿಕ್ಕಿಸುವಷ್ಟರಲ್ಲಿ ಭಯಂಕರವಾದ ಮುಳ್ಳು ನನ್ನ All Condition Gear Nike ಚಪ್ಪಲಿನ ಒಳಹೊಕ್ಕು, ಪಾದವನ್ನು ಛೇದಿಸಿತು! ಅಷ್ಟು ಹೊತ್ತು ಅನುಭವಿಸಿದ ಆನಂದ, ಒಂದೇ ಕ್ಷಣಕ್ಕೆ ಇಳಿಯಿತು! ಹೇಗೋ ಕಷ್ಟಪಟ್ಟು ಕಾಲು ಕಿತ್ತಿಕೊಂಡೆ, ಚಪ್ಪಲಿನಲ್ಲಿ ಸಿಲುಕಿಕೊಂಡ ಮುಳ್ಳನ್ನು ತೆಗೆಯಲು ತುಂಬಾ ತಿಣುಕಾಡಿದೆವು. ಕಡೆಗೆ handkerchief ಬಾಯಲ್ಲಿ ಹಾಕಿಕೊಂಡು ಹಲ್ಲಿನಿಂದ ಕೀಳಬೇಕಾಯಿತು! ಎಂತಹ ಹುಚ್ಚು ಅನುಭವ ಅಂತೀರ! ಸ್ವಲ್ಪ ಹೊತ್ತು ಕುಂಟುತ್ತ ನಡೆಯಬೇಕಾಯಿತು.

ಅದೇ ನೋವಿನಲ್ಲಿ ನಡೆಯುತ್ತಿರುವಾಗ "ಛಟ್ ಛಟಿಲ್" ಅನ್ನೋ ಶಬ್ದದಿಂದ ಸ್ವಲ್ಪ ತಿರುಗಿ ನೋಡಿದೆ. ಒಂದು ಕೈಯಲ್ಲಿ ಬೀಡಿ, ಮತ್ತೊಂದು ಕೈಯಲ್ಲಿ ಚಾಟಿ (ಅದಕ್ಕೆ ಸೊಡ್ಡು ಅಂತ ಹೆಸರು) ಹಿಡಿದುಕೊಂಡಿದ್ದ ಸಾಧು ತನಗೆ ತಾನೇ ಶಿಕ್ಷಿಸಿಕೊಳ್ಳುತ್ತಿದ್ದ. ಅವನ ಚಾಟಿಯ ಏಟುಗಳು ಅವನ ಬೆನ್ನ ಮೇಲೆ ಬೀಳುತ್ತಿದ್ದಂತೆಯೇ ನನ್ನ ಮುಳ್ಳಿನ ನೋವು ನನ್ನ ಲೋಕವನ್ನೇ ಬಿಟ್ಟು ಓಡಿ ಹೋಗಿತ್ತು! ಅವನ ಚಾಟಿಯ ಏಟಿಗೆ ತಕ್ಕಂತೆ ಪಕ್ಕದಲ್ಲೇ ಇದ್ದ ಅಜ್ಜಿಯೊಬ್ಬಳು ವಿಚಿತ್ರ ರೀತಿಯ ವಾದ್ಯವೊಂದನ್ನು ಬಾರಿಸುತ್ತಿದ್ದಳು. ನೋಡಲು ಡೋಲಿನಂತಿದ್ದರೂ ಅದೊಂದು ರೀತಿ ವಿಚಿತ್ರ ವಾದ್ಯ. ಒಂದು ಕಡೆ ಬಾರಿಸುವುದು ಮತ್ತೊಂದು ಕಡೆ ಬೆತ್ತದಿಂದ ತಿಕ್ಕುವುದು. Two in one ಥರ. ಇದಕ್ಕೆ 'ಉರಿಮೆ ವಾದ್ಯ' ಎನ್ನುತ್ತಾರೆ. ಬಾರಿಸಲು ಎಷ್ಟು ಕಷ್ಟ ಅಂತಿರಾ!ತನಗೆ ತಾನೆ ಥಳಿಸಿಕೊಳ್ಳುತ್ತಿದ್ದ ಸಾಧು (ಇವನಿಗೆ ಸಾಮಾನ್ಯವಾಗಿ "ಪೋತ್ಯಾ" ಅಂತ ಕರೆಯುತ್ತಾರೆ) ಆ ವಾದ್ಯ ಬಾರಿಸುತ್ತಿದ್ದ ಅಜ್ಜಿಯ ಪತಿದೇವರು. ಜಾನಪದದಲ್ಲಿ ಇವರನ್ನು ಮರಗಮ್ಮ ದೇವರನ್ನು ಆಡಿಸುವರು ಎನ್ನುತ್ತಾರೆ. ಅಲೆಮಾರಿ ಜನಾಂಗದವರು. ಮರಗಮ್ಮ ದೇವರ ಆರಾಧಕರು. ಚಾಟಿಯ ಬಿಸಿ ಏಟು ಬೆನ್ನನ್ನು ಬಿಸಿ ಮಾಡುತ್ತಿದ್ದರೂ ಸಾಧುವಿನ ಮುಖದಲ್ಲಿ ಮುಗುಳ್ನಗೆ ಯಾಕೆ? ಆಶ್ಚರ್ಯವಲ್ಲವೇ? ದೇವರಿಗಾಗಿ ಇವನೇಕೆ ಚಾಟಿ ಏಟು ತಿನ್ನಬೇಕು? ಸತ್ಯ ಇಷ್ಟೆ. ಅವನು ತಿನ್ನುತ್ತಿದ್ದ ಚಾಟಿ ಏಟು ದೇವರಿಗಾಗಿ ಅಲ್ಲ. ಊರ ಜನರ ಸುಖಕ್ಕಾಗಿ! ನಂಬುತ್ತೀರಾ? ನಮ್ಮೂರ ಜನ ಸುಖವಾಗಿರಲಿ, ಅವರಿಗೆ ಯಾವುದೇ ರೀತಿಯ ತೊಂದರೆಗಳು ಬರದಿರಲಿ, ಮಳೆ ಬೆಳೆ ಚನ್ನಾಗಿರಲಿ, ಊರಲ್ಲಿ ಯಾವುದೇ ರೋಗಗಳು ಸುಳಿಯದಿರಲಿ, ಭೂತ ಪ್ರೇತಗಳು ಊರ ಸೀಮೆಯನ್ನು ಪ್ರವೇಶಿಸದಿರಲಿ, ಯಾರೇ ತಪ್ಪು ಮಾಡಿರಲಿ, ಶಿಕ್ಷೆ ನನಗಿರಲಿ ಅನ್ನುವ ನಂಬಿಕೆ. ಅದಕ್ಕೆ ಚಾಟಿ ಏಟುಗಳು ಪೋತ್ಯಾನ ಬೆನ್ನಿಗೆ. ಅದೂ ಅವನಿಂದಲೇ! ಚಾಟಿ ಏಟಿನಿಂದಲೇ ನಿಜವಾದ ಭಕ್ತಿ ಮರಗಮ್ಮ ದೇವರಿಗೆ ಮುಟ್ಟುತ್ತದೆಂಬ ಅಪಾರವಾದ ನಂಬಿಕೆ. ಸಾಮಾನ್ಯವಾಗಿ ಇವರು ಊರೂರು ತಿರಗಾಡಿ ಪ್ರತಿಯೊಂದು ಊರಿಗೂ ಒಳ್ಳೆಯದಾಗಲಿ ಎಂದು ಹರಸುತ್ತಾರೆ. ಕೆಲವೊಮ್ಮೆ ಜಾತ್ರೆಗೂ ಹಾಜರಿ ಹಾಕುತ್ತಾರೆ. ಎಂತಹ ಬದುಕಲ್ಲವೇ? ಹೊಟ್ಟೆ ಪಾಡಿಗಾಗಿ ಏನೆಲ್ಲಾ ಕಷ್ಟ ಅನುಭವಿಸಬೇಕು ನೋಡಿ. ಶತಶತಮಾನಗಳಿಂದ ನಡೆದು ಬಂದ ಇಂತಹ ಸ್ವಯಂ ಹಿಂಸೆಯ ಪದ್ಧತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಇವೆ. ಜನರು ಇಂತಹ ಆಚರಣೆಗಳಲ್ಲಿ ಇನ್ನೂ ನಂಬಿಕೆ ಇಟ್ಟಿದ್ದಾರೆ. ಮಾನವೀಯ ಮೌಲ್ಯಗಳು ಪೋತ್ಯಾನಂತವರಿಗೆ ಇಲ್ಲವೇ? ಯಾವಾಗ ಬದಲಾವಣೆ? ಎಲ್ಲಿದೆ ಇಂತಹ ಜನರಿಗೆ ಶಿಕ್ಷಣ? ಉದ್ಯೋಗ? ಎಂತಹ ಘೋರ ಸತ್ಯವಲ್ಲವೇ?


ನಮ್ಮ ದಾರಿ ಮುಂದೆ ಸಾಗುತ್ತಿದ್ದಂತೆ, ಅಜ್ಜಿಯ ಉರಿಮೆ ವಾದ್ಯದ ಶಬ್ದ ನನ್ನ ಕಿವಿಗಳಲ್ಲಿ ತಾಂಡವ ನೃತ್ಯವಾಡುತ್ತಿತ್ತು. ಚಾಟಿಯ ಶಬ್ದ ನೆನಪಾದಂತೆ ಮುಳ್ಳು ಚುಚ್ಚಿದ ನೋವು ದೂರವಾಗಿ ನೆಟ್ಟಗೆ ನಡೆಯಲು ಶುರು ಮಾಡಿದೆ. ಬೆಟ್ಟ ಹತ್ತುತ್ತಿದ್ದಂತೆ ಮೊದಲು ಕಂಡ ದೃಶ್ಯಗಳು ಮತ್ತೆ ಕಣ್ಣಿಗೆ ಬಿದ್ದವು. ಕೊನೆಯಿಲ್ಲದ ಭಿಕ್ಷುಕರ ಸಾಲು, ಜಾನಪದ ಹಾಡುಗಳನ್ನು ಹಾಡುವ ಭಕ್ತರು, ಗೊರವರು, ಸಾಧುಗಳು, ಪೂಜಾರಿಗಳು, ಭಂಡಾರದ ತಿಲಕವನ್ನಿಡುವ ಭಕ್ತರು, ಇತ್ಯಾದಿ. ಅಂತೂ ಬೆಟ್ಟದ ಮೇಲಿನ ಗುಡಿಯ ದ್ವಾರ ಬಾಗಿಲನ್ನು ತಲುಪಿದೆವು. ಜನಟ್ಟಣೆ ಕಡಿಮೆ ಇದ್ದದ್ದರಿಂದ ದರ್ಶನಕ್ಕೆ ತಡವಾಗಲಿಲ್ಲ. ಮೈಲಾರಲಿಂಗನ ಗುಡಿ, ಗುಡಿಯಾಗಿರಲಿಲ್ಲ. ಅದೊಂದು ಗುಹೆ ಅನ್ನಬಹುದು. ಒಂದಕ್ಕೊಂದು ಅಪ್ಪಿಕೊಂಡಂತಿದ್ದ ದೊಡ್ಡ ಕಲ್ಲುಗಳ ಕೆಳಗೆ ಮೈಲಾರಲಿಂಗನ ವಿಗ್ರಹವಿದೆ. ಒಳಗೆ ಹೋಗುವುದಕ್ಕೆ ಚಿಕ್ಕದಾದ ದ್ವಾರವಿದೆ. ಬಗ್ಗಿ ಒಳಗೆ ಹೋಗಬೇಕು. ಹೊರಗೆ ಬರಬೇಕಾದರೆ ಇನ್ನೂ ತಿಣುಕಾಡಬೇಕು. ಹೊರಬರುವ ದಾರಿ, ಒಳಗೆ ಹೋಗುವ ದಾರಿಯ ಅರ್ಧಕ್ಕಿಂತ ಚಿಕ್ಕದು! ಕಪ್ಪೆಯಂತೆ ಬಗ್ಗಿ ಹೊರಬರಬೇಕು. ಗರ್ಭಗುಡಿ (ಗುಹೆ) ಯಲ್ಲಿ ಫೋಟೊ ಕ್ಲಿಕ್ಕಿಸಲು ಅನುಮತಿ ಇತ್ತು. ನಾನು ಒಂದು ಫೋಟೊ ಕ್ಲಿಕ್ಕಿಸಿದೆ.


ಆ ಗುಹೆಯ ಸುತ್ತಮುತ್ತಲಿರುವ ಒಂದೊಂದು ಸ್ಥಳಕ್ಕೂ ಒಂದೊಂದು ಇತಿಹಾಸವಿದೆ. ಗರ್ಭಗುಡಿಯ ಮುಂದೆ ಒಂದು ದೊಡ್ಡ ಬಂಡೆಗಲ್ಲಿದೆ (ಚಿತ್ರದಲ್ಲಿದೆ). ಸಾಮನ್ಯವಾಗಿ ನಡೆಯಲು ಕಷ್ಟಪಡುವಂತಹ ಪೂಜಾರಿ ಜಾತ್ರೆಯ ದಿನ ಆ ದೈತ್ಯಾಕಾರದ ಬಂಡೆಗಲ್ಲನ್ನು ಹಗ್ಗ ಹಿಡಿದು ಸರಸರನೆ ಏರುತ್ತಾನೆ, ಹಾಗೆ ಏರಿ ಬಂಡೆಗಲ್ಲಿನ ಮೇಲಿರುವ ಕಳಶದ ಮೇಲೆ ದೀಪ ಹಚ್ಚುತ್ತಾನೆ! ದೀಪ ಹಚ್ಚಿದ ಮೇಲೆ ಬಂಡೆಗಲ್ಲಿನ ಮೇಲಿಂದ ಕೆಳಗೆ ಜನರ ಮೇಲೆ ಹಾರಿಕೊಳ್ಳುತ್ತಾನೆ. ಜನರು ಅವನನ್ನು ಸುರಕ್ಷಿತವಾಗಿ ಹಿಡಿದುಕೊಳ್ಳುತ್ತಾರೆ. ಹಾಗೆ ಹಿಡಿದುಕೊಳ್ಳುವಾಗ ಯಾರ ಕೈ ಈ ಪೂಜಾರಿಗೆ ತಗಲುತ್ತದೆಯೋ ಅವರ ಪಾಪಗಳೆಲ್ಲ ಪರಿಹಾರವಾಗುತ್ತವಂತೆ! ಇಂದಿಗೂ ಜಾತ್ರೆಯ ದಿನ ಈ ಪವಾಡವನ್ನು ನೋಡಬಹುದು. ಅದು ಹೇಗೆ ಸಾಧ್ಯ? ಪೂಜಾರಿಯನ್ನು ನೋಡಿದ್ದೇನೆ. ಅವನು ಏರಿದ್ದನ್ನು, ಹಾರಿಕೊಂಡದ್ದನ್ನು ನೋಡಿದ ನೂರಾರು ಜನರನ್ನು ಮಾತನಾಡಿಸಿದ್ದೇನೆ, ಹೇಗೆ ಅಂತ ನನಗೂ ತಿಳಿಯದು. ಸಧ್ಯಕ್ಕೆ ದೇವರ ಮಹಿಮೆ ಅಂದುಕೊಂಡರಾಯಿತು!


ಜಾತ್ರೆಯ ದಿನ ಇನ್ನೂ ಕೆಲವು ಪವಾಡಗಳು ನಡೆಯುತ್ತವೆ. ನಂಬಲು ಸಾಧ್ಯವೇ ಇಲ್ಲ. ಕೆಲವರು ತಮ್ಮ ಆಸೆ ಈಡೇರಿದರೆ, ಹರಿತವಾದ ಕಬ್ಬಿಣದ ಕೋಲನ್ನು ಮೊಣಕಾಲಿನ ಕೆಳಗಿರುವ ಮಾಂಸದ ಒಂದು ಭಾಗದಲ್ಲಿ ಚುಚ್ಚಿಕೊಂಡು ಮತ್ತೊಂದು ಭಾಗದಲ್ಲಿ ತೆಗೆಯುತ್ತಾರೆ! ಅಷ್ಟೇ ಅಲ್ಲ, ಅಂತವನೇ ಇನ್ನೊಬ್ಬ ಭಕ್ತ ಇದ್ದರೆ, ಅದೇ ಹರಿತವಾದ ಕೋಲಿನಿಂದ ತನ್ನ ಕಾಲಲ್ಲೂ ಚುಚ್ಚಿಕೊಂಡ ಹೊರತೆಗೆಯುತ್ತಾನೆ. ಇನ್ನೂ ಇಂತಹ ಭಕ್ತರಿದ್ದರೆ ಕೋಲು ಚಿಚ್ಚಿಕೊಳ್ಳುವ ಪವಾಡ ನಡೆಯುತ್ತಲೇ ಇರುತ್ತದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಮೈಲಾಪುರದಲ್ಲಿ ಇದೆಲ್ಲ ಸಾಮಾನ್ಯವಾಗಿ ನಡೆಯುತ್ತದೆ! ನನಗೆ ಇದೆಲ್ಲ ನೋಡಲಾಗಲಿಲ್ಲ. ಕಾಕಾನಿಂದ, ನೂರಾರು ಜನರಿಂದ ಕೇಳಿ ತಿಳಿದುಕೊಂಡಿದ್ದೇನೆ. ಸರಕಾರ ಇಂತಹ ಪದ್ಧತಿಗಳನ್ನು ರದ್ದುಗೊಳಿಸಲು ಪ್ರಯತ್ನ ಪಟ್ಟದ್ದು ಉಂಟು. ಪ್ರಯತ್ನಗಳು ಪ್ರಯತ್ನಗಳಾಗೇ ಉಳಿದವು. ಏನೂ ಬದಲಾಗಲಿಲ್ಲ. ಯಾಕೆ? ಜನರಲ್ಲಿ ಇಂತಹ ಪವಾಡಗಳಲ್ಲಿ ಇನ್ನೂ ನಂಬಿಕೆ ಇದೆ. ಹರಕೆ ಸಲ್ಲಿಸುವವರಲ್ಲಿ ಯಾರಿಗಾದರೂ HIV ಸೊಂಕು ತಗುಲಿದ್ದರೆ? ಊಹಿಸಿಕೊಳ್ಳಿ, ಎಷ್ಟು ಜನರಿಗೆ ಸೊಂಕು ತಟ್ಟಲಿಕ್ಕಿಲ್ಲ? ಎಷ್ಟು ಜನ ದೇವರಹೆಸರಿನಲ್ಲಿ ನರಳಲಿಕ್ಕಿಲ್ಲ? ಸಧ್ಯಕ್ಕೆ ಇಂತಹ ಪರಿಸ್ಥಿತಿ ಇನ್ನೂ ಉದ್ಬವಿಸಿಲ್ಲ ಅನ್ನೋದೆ ಒಂದು ಆಶ್ಚರ್ಯಚಕಿತವಾದ ಸಂಗತಿ! ದೇವರ ಮಹಿಮೆ ಅಂದುಕೊಳ್ಳಬಹುದೇ? ಮುಂದೇನಾಗುತ್ತದೆ ಕಾದು ನೋಡಬೇಕು.


ಗುಡಿಯ ಸುತ್ತ ಅತ್ತಿತ್ತ ತಿರುಗಾಡುತ್ತ ಇನ್ನಷ್ಟು "ಹೀಗೂ ಉಂಟೆ" ಅನ್ನೋ ದೃಶ್ಯಗಳನ್ನು ನೋಡಿದೆ. ಮಲ್ಲಯ್ಯನ ಗರ್ಭಗುಡಿಯ ಬಲಕ್ಕೆ, ಸ್ವಲ್ಪ ಕೆಳಗೆ, ಅವನ ಧರ್ಮಪತ್ನಿಯಾದ ಗಂಗೆಮಾಳಮ್ಮನ (ವಿವರಗಳಿಗೆ ಭಾಗ-೧ ನೋಡಿ) ಗುಡಿಯಿದೆ. ಗಂಗೆಮಾಳಮ್ಮಳಿಗೆ ನಮಸ್ಕರಿಸಿ ಮುಂದೆ ಹೋದರೆ, ೧೫-೨೦ ಜನ ಭಿಕ್ಷಾ ಪತ್ರೆಯ ಸಮೇತ ನಮ್ಮನ್ನು ಮುತ್ತಿಗೆ ಹಾಕಿದರು! "ಅಣ್ಣ ಧರ್ಮ! ಸರ್ ಧರ್ಮ ಮಾಡಿ!" ಎಲ್ಲಿದೆ ಧರ್ಮ? ಜೇಬಿನಲ್ಲಿದ್ದ ಚಿಲ್ಲರೆ ಧರ್ಮ (ಹಣ) ಖಾಲಿಯಾಗಿ ಕಾಲವಾಗಿತ್ತು. ನಾನಂತು ಮೊದಲು ನನ್ನ wallet ಇದೆಯೋ ಇಲ್ಲವೋ ಅಂತ ಖಚಿತಪಡಿಸಿಕೊಂಡೆ. ಕಾಕಾ ಹೇಗೋ ಅಲ್ಲಿಂದ ತಪ್ಪಿಸಿಕೊಂಡರು. ಅಲ್ಲಿಂದ ಪಾರಾಗಲು ತಿಣುಕಾಡುತ್ತಿದ್ದೆ. ತಕ್ಷಣ ಒಂದು ಉಪಾಯ ಹೊಳೆಯಿತು. ಎಲ್ಲರಿಗೂ ಕ್ಯಾಮರ ತೋರಿಸಿದೆ. "ಸ್ವಲ್ಪ ದೂರ ಸರಿದು ನಿಂತ್ಕೊಳ್ಳಿ ನಿಮ್ಮ ಫೋಟೊ ತೆಗೆದು ಪೇಪರ್ ಅಲ್ಲಿ ಹಾಕಬೇಕು" ಅಂದೆ. ತಕ್ಷಣ "ಅಣ್ಣ ನನ್ನ ಪೋಟು (ಫೋಟೋ), ನನ್ ಪೋಟು" ಅಂತ ಸ್ವಲ್ಪ ದೂರ ಸರಿದರು. ನಿಟ್ಟುಸಿರು ಬಿಟ್ಟೆ. ಫೋಟೊ ತೆಗೆದು ಧರ್ಮ ಮಾಡದಿದ್ದರೆ ಹಿಡಿದು ಹೀಯಾಳಿಸಿಯಾರು ಅಂತ, ಜೇಬಿನಲ್ಲಿದ್ದ ೧೦ ರೂಪಾಯಿ ನೋಟನ್ನು ಅಲ್ಲಿದ್ದ ಒಬ್ಬ ಮಹಾಶಯನಿಗೆ ಕೊಟ್ಟು ಚಿಲ್ಲರೆ ಪಡೆದೆ. ಫೋಟೊ ತೆಗೆದು ಉಳಿದಿದ್ದ ಚಿಲ್ಲರೆ ಹಣವನ್ನೆಲ್ಲ ದಾನ ಮಾಡಿದೆ. ಸಾಕಾಗಬೇಕಲ್ಲ ಎಲ್ಲರಿಗೂ! ಹೇಗೋ ತಪ್ಪಿಸಿಕೊಂಡೆ.ಮುಂದುವರಿಯುವುದು.....
ನೋಡಿ: ಭಾಗ ೪

No comments:

Post a Comment

 

Creative Commons License
This work by Manjunath Singe is licensed under a Creative Commons Attribution-Noncommercial-No Derivative Works 2.5 India License. The views and opinions expressed in this work are strictly those of the author and do not represent his employer's views in anyway.