ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೩

Sunday, January 27, 2008


ಮಧ್ಯಾನ ಊಟವಿಲ್ಲದಿದ್ದರೂ ಜಾತ್ರೆಯಲ್ಲಿ ಕೊಂಡು ತಿಂದ ಸಂಕ್ರಾಂತಿಯ ಕಬ್ಬು ನನ್ನನ್ನು ಮತ್ತಷ್ಟು ಉತ್ಸಾಹಿಯಾಗಿಸಿತ್ತು. ಕಬ್ಬಿನ ರುಚಿಯೇ ಹಾಗಿತ್ತು ಅನ್ನಿ! ಜರ್ಜರಿತವಾಗಿದ್ದ ಜಾತ್ರೆಯ ಜನದಟ್ಟಣೆ ೩ ಗಂಟೆಯ ನಂತರ ಕಡಿಮೆಯಾಗುತ್ತಾ ಬಂತು. ಮತ್ತೆ ಬೆಟ್ಟದತ್ತ ನಮ್ಮ(ನಾನು, ಕಾಕಾ, ಲೋಕನಥ ಸರ್) ಸವಾರಿ. ನನಗಂತು ಜಾತ್ರೆಯ ಪ್ರತಿಯೊಂದು ದೃಶ್ಯವೂ ವಿನೊತನವೆನಿಸುತ್ತಿತ್ತು. ಹೀಗೂ ಉಂಟೆ ಅಂತ!


ಮೈಲಾಪುರದಲ್ಲಿ ಬಸ್ ಸ್ಟ್ಯಾಂಡ್ ಅಂತ ಇಲ್ಲ. ಆದರೆ ಜಾತ್ರೆಯ ಸಮಯದಲ್ಲಿ ಬೆಟ್ಟದ ಪಕ್ಕದಲ್ಲಿನ ಹೊಲಗಳ ಸ್ವಲ್ಪ ಭಾಗ ಬಸ್ ಸ್ಟ್ಯಾಂಡ್ ಆಗಿ ಬಿಡುತ್ತದೆ. ಜನರಿಂದ ತುಂಬಿ ತುಳುಕುವ ಬಸ್ಸುಗಳ ವೈಭವ ಹೇಳತೀರದು. ನಡೆಯುತ್ತಿದ್ದುದ್ದು ದಾರಿಯ ಮೇಲಾದರೂ ನನ್ನ ಕಣ್ಣುಗಳು ಬಸ್ಸಿನ ಮೇಲೆ ಕುಳಿತ ಜನರ ಮೇಲೆ. ಫೋಟೊ ತೆಗೆಯುವ ಚಪಲ ಬೇರೆ. ತುಂಬಿದ ಬಸ್ಸಿನ ಫೋಟೊ ಕ್ಲಿಕ್ಕಿಸುವಷ್ಟರಲ್ಲಿ ಭಯಂಕರವಾದ ಮುಳ್ಳು ನನ್ನ All Condition Gear Nike ಚಪ್ಪಲಿನ ಒಳಹೊಕ್ಕು, ಪಾದವನ್ನು ಛೇದಿಸಿತು! ಅಷ್ಟು ಹೊತ್ತು ಅನುಭವಿಸಿದ ಆನಂದ, ಒಂದೇ ಕ್ಷಣಕ್ಕೆ ಇಳಿಯಿತು! ಹೇಗೋ ಕಷ್ಟಪಟ್ಟು ಕಾಲು ಕಿತ್ತಿಕೊಂಡೆ, ಚಪ್ಪಲಿನಲ್ಲಿ ಸಿಲುಕಿಕೊಂಡ ಮುಳ್ಳನ್ನು ತೆಗೆಯಲು ತುಂಬಾ ತಿಣುಕಾಡಿದೆವು. ಕಡೆಗೆ handkerchief ಬಾಯಲ್ಲಿ ಹಾಕಿಕೊಂಡು ಹಲ್ಲಿನಿಂದ ಕೀಳಬೇಕಾಯಿತು! ಎಂತಹ ಹುಚ್ಚು ಅನುಭವ ಅಂತೀರ! ಸ್ವಲ್ಪ ಹೊತ್ತು ಕುಂಟುತ್ತ ನಡೆಯಬೇಕಾಯಿತು.

ಅದೇ ನೋವಿನಲ್ಲಿ ನಡೆಯುತ್ತಿರುವಾಗ "ಛಟ್ ಛಟಿಲ್" ಅನ್ನೋ ಶಬ್ದದಿಂದ ಸ್ವಲ್ಪ ತಿರುಗಿ ನೋಡಿದೆ. ಒಂದು ಕೈಯಲ್ಲಿ ಬೀಡಿ, ಮತ್ತೊಂದು ಕೈಯಲ್ಲಿ ಚಾಟಿ (ಅದಕ್ಕೆ ಸೊಡ್ಡು ಅಂತ ಹೆಸರು) ಹಿಡಿದುಕೊಂಡಿದ್ದ ಸಾಧು ತನಗೆ ತಾನೇ ಶಿಕ್ಷಿಸಿಕೊಳ್ಳುತ್ತಿದ್ದ. ಅವನ ಚಾಟಿಯ ಏಟುಗಳು ಅವನ ಬೆನ್ನ ಮೇಲೆ ಬೀಳುತ್ತಿದ್ದಂತೆಯೇ ನನ್ನ ಮುಳ್ಳಿನ ನೋವು ನನ್ನ ಲೋಕವನ್ನೇ ಬಿಟ್ಟು ಓಡಿ ಹೋಗಿತ್ತು! ಅವನ ಚಾಟಿಯ ಏಟಿಗೆ ತಕ್ಕಂತೆ ಪಕ್ಕದಲ್ಲೇ ಇದ್ದ ಅಜ್ಜಿಯೊಬ್ಬಳು ವಿಚಿತ್ರ ರೀತಿಯ ವಾದ್ಯವೊಂದನ್ನು ಬಾರಿಸುತ್ತಿದ್ದಳು. ನೋಡಲು ಡೋಲಿನಂತಿದ್ದರೂ ಅದೊಂದು ರೀತಿ ವಿಚಿತ್ರ ವಾದ್ಯ. ಒಂದು ಕಡೆ ಬಾರಿಸುವುದು ಮತ್ತೊಂದು ಕಡೆ ಬೆತ್ತದಿಂದ ತಿಕ್ಕುವುದು. Two in one ಥರ. ಇದಕ್ಕೆ 'ಉರಿಮೆ ವಾದ್ಯ' ಎನ್ನುತ್ತಾರೆ. ಬಾರಿಸಲು ಎಷ್ಟು ಕಷ್ಟ ಅಂತಿರಾ!ತನಗೆ ತಾನೆ ಥಳಿಸಿಕೊಳ್ಳುತ್ತಿದ್ದ ಸಾಧು (ಇವನಿಗೆ ಸಾಮಾನ್ಯವಾಗಿ "ಪೋತ್ಯಾ" ಅಂತ ಕರೆಯುತ್ತಾರೆ) ಆ ವಾದ್ಯ ಬಾರಿಸುತ್ತಿದ್ದ ಅಜ್ಜಿಯ ಪತಿದೇವರು. ಜಾನಪದದಲ್ಲಿ ಇವರನ್ನು ಮರಗಮ್ಮ ದೇವರನ್ನು ಆಡಿಸುವರು ಎನ್ನುತ್ತಾರೆ. ಅಲೆಮಾರಿ ಜನಾಂಗದವರು. ಮರಗಮ್ಮ ದೇವರ ಆರಾಧಕರು. ಚಾಟಿಯ ಬಿಸಿ ಏಟು ಬೆನ್ನನ್ನು ಬಿಸಿ ಮಾಡುತ್ತಿದ್ದರೂ ಸಾಧುವಿನ ಮುಖದಲ್ಲಿ ಮುಗುಳ್ನಗೆ ಯಾಕೆ? ಆಶ್ಚರ್ಯವಲ್ಲವೇ? ದೇವರಿಗಾಗಿ ಇವನೇಕೆ ಚಾಟಿ ಏಟು ತಿನ್ನಬೇಕು? ಸತ್ಯ ಇಷ್ಟೆ. ಅವನು ತಿನ್ನುತ್ತಿದ್ದ ಚಾಟಿ ಏಟು ದೇವರಿಗಾಗಿ ಅಲ್ಲ. ಊರ ಜನರ ಸುಖಕ್ಕಾಗಿ! ನಂಬುತ್ತೀರಾ? ನಮ್ಮೂರ ಜನ ಸುಖವಾಗಿರಲಿ, ಅವರಿಗೆ ಯಾವುದೇ ರೀತಿಯ ತೊಂದರೆಗಳು ಬರದಿರಲಿ, ಮಳೆ ಬೆಳೆ ಚನ್ನಾಗಿರಲಿ, ಊರಲ್ಲಿ ಯಾವುದೇ ರೋಗಗಳು ಸುಳಿಯದಿರಲಿ, ಭೂತ ಪ್ರೇತಗಳು ಊರ ಸೀಮೆಯನ್ನು ಪ್ರವೇಶಿಸದಿರಲಿ, ಯಾರೇ ತಪ್ಪು ಮಾಡಿರಲಿ, ಶಿಕ್ಷೆ ನನಗಿರಲಿ ಅನ್ನುವ ನಂಬಿಕೆ. ಅದಕ್ಕೆ ಚಾಟಿ ಏಟುಗಳು ಪೋತ್ಯಾನ ಬೆನ್ನಿಗೆ. ಅದೂ ಅವನಿಂದಲೇ! ಚಾಟಿ ಏಟಿನಿಂದಲೇ ನಿಜವಾದ ಭಕ್ತಿ ಮರಗಮ್ಮ ದೇವರಿಗೆ ಮುಟ್ಟುತ್ತದೆಂಬ ಅಪಾರವಾದ ನಂಬಿಕೆ. ಸಾಮಾನ್ಯವಾಗಿ ಇವರು ಊರೂರು ತಿರಗಾಡಿ ಪ್ರತಿಯೊಂದು ಊರಿಗೂ ಒಳ್ಳೆಯದಾಗಲಿ ಎಂದು ಹರಸುತ್ತಾರೆ. ಕೆಲವೊಮ್ಮೆ ಜಾತ್ರೆಗೂ ಹಾಜರಿ ಹಾಕುತ್ತಾರೆ. ಎಂತಹ ಬದುಕಲ್ಲವೇ? ಹೊಟ್ಟೆ ಪಾಡಿಗಾಗಿ ಏನೆಲ್ಲಾ ಕಷ್ಟ ಅನುಭವಿಸಬೇಕು ನೋಡಿ. ಶತಶತಮಾನಗಳಿಂದ ನಡೆದು ಬಂದ ಇಂತಹ ಸ್ವಯಂ ಹಿಂಸೆಯ ಪದ್ಧತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಇವೆ. ಜನರು ಇಂತಹ ಆಚರಣೆಗಳಲ್ಲಿ ಇನ್ನೂ ನಂಬಿಕೆ ಇಟ್ಟಿದ್ದಾರೆ. ಮಾನವೀಯ ಮೌಲ್ಯಗಳು ಪೋತ್ಯಾನಂತವರಿಗೆ ಇಲ್ಲವೇ? ಯಾವಾಗ ಬದಲಾವಣೆ? ಎಲ್ಲಿದೆ ಇಂತಹ ಜನರಿಗೆ ಶಿಕ್ಷಣ? ಉದ್ಯೋಗ? ಎಂತಹ ಘೋರ ಸತ್ಯವಲ್ಲವೇ?


ನಮ್ಮ ದಾರಿ ಮುಂದೆ ಸಾಗುತ್ತಿದ್ದಂತೆ, ಅಜ್ಜಿಯ ಉರಿಮೆ ವಾದ್ಯದ ಶಬ್ದ ನನ್ನ ಕಿವಿಗಳಲ್ಲಿ ತಾಂಡವ ನೃತ್ಯವಾಡುತ್ತಿತ್ತು. ಚಾಟಿಯ ಶಬ್ದ ನೆನಪಾದಂತೆ ಮುಳ್ಳು ಚುಚ್ಚಿದ ನೋವು ದೂರವಾಗಿ ನೆಟ್ಟಗೆ ನಡೆಯಲು ಶುರು ಮಾಡಿದೆ. ಬೆಟ್ಟ ಹತ್ತುತ್ತಿದ್ದಂತೆ ಮೊದಲು ಕಂಡ ದೃಶ್ಯಗಳು ಮತ್ತೆ ಕಣ್ಣಿಗೆ ಬಿದ್ದವು. ಕೊನೆಯಿಲ್ಲದ ಭಿಕ್ಷುಕರ ಸಾಲು, ಜಾನಪದ ಹಾಡುಗಳನ್ನು ಹಾಡುವ ಭಕ್ತರು, ಗೊರವರು, ಸಾಧುಗಳು, ಪೂಜಾರಿಗಳು, ಭಂಡಾರದ ತಿಲಕವನ್ನಿಡುವ ಭಕ್ತರು, ಇತ್ಯಾದಿ. ಅಂತೂ ಬೆಟ್ಟದ ಮೇಲಿನ ಗುಡಿಯ ದ್ವಾರ ಬಾಗಿಲನ್ನು ತಲುಪಿದೆವು. ಜನಟ್ಟಣೆ ಕಡಿಮೆ ಇದ್ದದ್ದರಿಂದ ದರ್ಶನಕ್ಕೆ ತಡವಾಗಲಿಲ್ಲ. ಮೈಲಾರಲಿಂಗನ ಗುಡಿ, ಗುಡಿಯಾಗಿರಲಿಲ್ಲ. ಅದೊಂದು ಗುಹೆ ಅನ್ನಬಹುದು. ಒಂದಕ್ಕೊಂದು ಅಪ್ಪಿಕೊಂಡಂತಿದ್ದ ದೊಡ್ಡ ಕಲ್ಲುಗಳ ಕೆಳಗೆ ಮೈಲಾರಲಿಂಗನ ವಿಗ್ರಹವಿದೆ. ಒಳಗೆ ಹೋಗುವುದಕ್ಕೆ ಚಿಕ್ಕದಾದ ದ್ವಾರವಿದೆ. ಬಗ್ಗಿ ಒಳಗೆ ಹೋಗಬೇಕು. ಹೊರಗೆ ಬರಬೇಕಾದರೆ ಇನ್ನೂ ತಿಣುಕಾಡಬೇಕು. ಹೊರಬರುವ ದಾರಿ, ಒಳಗೆ ಹೋಗುವ ದಾರಿಯ ಅರ್ಧಕ್ಕಿಂತ ಚಿಕ್ಕದು! ಕಪ್ಪೆಯಂತೆ ಬಗ್ಗಿ ಹೊರಬರಬೇಕು. ಗರ್ಭಗುಡಿ (ಗುಹೆ) ಯಲ್ಲಿ ಫೋಟೊ ಕ್ಲಿಕ್ಕಿಸಲು ಅನುಮತಿ ಇತ್ತು. ನಾನು ಒಂದು ಫೋಟೊ ಕ್ಲಿಕ್ಕಿಸಿದೆ.


ಆ ಗುಹೆಯ ಸುತ್ತಮುತ್ತಲಿರುವ ಒಂದೊಂದು ಸ್ಥಳಕ್ಕೂ ಒಂದೊಂದು ಇತಿಹಾಸವಿದೆ. ಗರ್ಭಗುಡಿಯ ಮುಂದೆ ಒಂದು ದೊಡ್ಡ ಬಂಡೆಗಲ್ಲಿದೆ (ಚಿತ್ರದಲ್ಲಿದೆ). ಸಾಮನ್ಯವಾಗಿ ನಡೆಯಲು ಕಷ್ಟಪಡುವಂತಹ ಪೂಜಾರಿ ಜಾತ್ರೆಯ ದಿನ ಆ ದೈತ್ಯಾಕಾರದ ಬಂಡೆಗಲ್ಲನ್ನು ಹಗ್ಗ ಹಿಡಿದು ಸರಸರನೆ ಏರುತ್ತಾನೆ, ಹಾಗೆ ಏರಿ ಬಂಡೆಗಲ್ಲಿನ ಮೇಲಿರುವ ಕಳಶದ ಮೇಲೆ ದೀಪ ಹಚ್ಚುತ್ತಾನೆ! ದೀಪ ಹಚ್ಚಿದ ಮೇಲೆ ಬಂಡೆಗಲ್ಲಿನ ಮೇಲಿಂದ ಕೆಳಗೆ ಜನರ ಮೇಲೆ ಹಾರಿಕೊಳ್ಳುತ್ತಾನೆ. ಜನರು ಅವನನ್ನು ಸುರಕ್ಷಿತವಾಗಿ ಹಿಡಿದುಕೊಳ್ಳುತ್ತಾರೆ. ಹಾಗೆ ಹಿಡಿದುಕೊಳ್ಳುವಾಗ ಯಾರ ಕೈ ಈ ಪೂಜಾರಿಗೆ ತಗಲುತ್ತದೆಯೋ ಅವರ ಪಾಪಗಳೆಲ್ಲ ಪರಿಹಾರವಾಗುತ್ತವಂತೆ! ಇಂದಿಗೂ ಜಾತ್ರೆಯ ದಿನ ಈ ಪವಾಡವನ್ನು ನೋಡಬಹುದು. ಅದು ಹೇಗೆ ಸಾಧ್ಯ? ಪೂಜಾರಿಯನ್ನು ನೋಡಿದ್ದೇನೆ. ಅವನು ಏರಿದ್ದನ್ನು, ಹಾರಿಕೊಂಡದ್ದನ್ನು ನೋಡಿದ ನೂರಾರು ಜನರನ್ನು ಮಾತನಾಡಿಸಿದ್ದೇನೆ, ಹೇಗೆ ಅಂತ ನನಗೂ ತಿಳಿಯದು. ಸಧ್ಯಕ್ಕೆ ದೇವರ ಮಹಿಮೆ ಅಂದುಕೊಂಡರಾಯಿತು!


ಜಾತ್ರೆಯ ದಿನ ಇನ್ನೂ ಕೆಲವು ಪವಾಡಗಳು ನಡೆಯುತ್ತವೆ. ನಂಬಲು ಸಾಧ್ಯವೇ ಇಲ್ಲ. ಕೆಲವರು ತಮ್ಮ ಆಸೆ ಈಡೇರಿದರೆ, ಹರಿತವಾದ ಕಬ್ಬಿಣದ ಕೋಲನ್ನು ಮೊಣಕಾಲಿನ ಕೆಳಗಿರುವ ಮಾಂಸದ ಒಂದು ಭಾಗದಲ್ಲಿ ಚುಚ್ಚಿಕೊಂಡು ಮತ್ತೊಂದು ಭಾಗದಲ್ಲಿ ತೆಗೆಯುತ್ತಾರೆ! ಅಷ್ಟೇ ಅಲ್ಲ, ಅಂತವನೇ ಇನ್ನೊಬ್ಬ ಭಕ್ತ ಇದ್ದರೆ, ಅದೇ ಹರಿತವಾದ ಕೋಲಿನಿಂದ ತನ್ನ ಕಾಲಲ್ಲೂ ಚುಚ್ಚಿಕೊಂಡ ಹೊರತೆಗೆಯುತ್ತಾನೆ. ಇನ್ನೂ ಇಂತಹ ಭಕ್ತರಿದ್ದರೆ ಕೋಲು ಚಿಚ್ಚಿಕೊಳ್ಳುವ ಪವಾಡ ನಡೆಯುತ್ತಲೇ ಇರುತ್ತದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಮೈಲಾಪುರದಲ್ಲಿ ಇದೆಲ್ಲ ಸಾಮಾನ್ಯವಾಗಿ ನಡೆಯುತ್ತದೆ! ನನಗೆ ಇದೆಲ್ಲ ನೋಡಲಾಗಲಿಲ್ಲ. ಕಾಕಾನಿಂದ, ನೂರಾರು ಜನರಿಂದ ಕೇಳಿ ತಿಳಿದುಕೊಂಡಿದ್ದೇನೆ. ಸರಕಾರ ಇಂತಹ ಪದ್ಧತಿಗಳನ್ನು ರದ್ದುಗೊಳಿಸಲು ಪ್ರಯತ್ನ ಪಟ್ಟದ್ದು ಉಂಟು. ಪ್ರಯತ್ನಗಳು ಪ್ರಯತ್ನಗಳಾಗೇ ಉಳಿದವು. ಏನೂ ಬದಲಾಗಲಿಲ್ಲ. ಯಾಕೆ? ಜನರಲ್ಲಿ ಇಂತಹ ಪವಾಡಗಳಲ್ಲಿ ಇನ್ನೂ ನಂಬಿಕೆ ಇದೆ. ಹರಕೆ ಸಲ್ಲಿಸುವವರಲ್ಲಿ ಯಾರಿಗಾದರೂ HIV ಸೊಂಕು ತಗುಲಿದ್ದರೆ? ಊಹಿಸಿಕೊಳ್ಳಿ, ಎಷ್ಟು ಜನರಿಗೆ ಸೊಂಕು ತಟ್ಟಲಿಕ್ಕಿಲ್ಲ? ಎಷ್ಟು ಜನ ದೇವರಹೆಸರಿನಲ್ಲಿ ನರಳಲಿಕ್ಕಿಲ್ಲ? ಸಧ್ಯಕ್ಕೆ ಇಂತಹ ಪರಿಸ್ಥಿತಿ ಇನ್ನೂ ಉದ್ಬವಿಸಿಲ್ಲ ಅನ್ನೋದೆ ಒಂದು ಆಶ್ಚರ್ಯಚಕಿತವಾದ ಸಂಗತಿ! ದೇವರ ಮಹಿಮೆ ಅಂದುಕೊಳ್ಳಬಹುದೇ? ಮುಂದೇನಾಗುತ್ತದೆ ಕಾದು ನೋಡಬೇಕು.


ಗುಡಿಯ ಸುತ್ತ ಅತ್ತಿತ್ತ ತಿರುಗಾಡುತ್ತ ಇನ್ನಷ್ಟು "ಹೀಗೂ ಉಂಟೆ" ಅನ್ನೋ ದೃಶ್ಯಗಳನ್ನು ನೋಡಿದೆ. ಮಲ್ಲಯ್ಯನ ಗರ್ಭಗುಡಿಯ ಬಲಕ್ಕೆ, ಸ್ವಲ್ಪ ಕೆಳಗೆ, ಅವನ ಧರ್ಮಪತ್ನಿಯಾದ ಗಂಗೆಮಾಳಮ್ಮನ (ವಿವರಗಳಿಗೆ ಭಾಗ-೧ ನೋಡಿ) ಗುಡಿಯಿದೆ. ಗಂಗೆಮಾಳಮ್ಮಳಿಗೆ ನಮಸ್ಕರಿಸಿ ಮುಂದೆ ಹೋದರೆ, ೧೫-೨೦ ಜನ ಭಿಕ್ಷಾ ಪತ್ರೆಯ ಸಮೇತ ನಮ್ಮನ್ನು ಮುತ್ತಿಗೆ ಹಾಕಿದರು! "ಅಣ್ಣ ಧರ್ಮ! ಸರ್ ಧರ್ಮ ಮಾಡಿ!" ಎಲ್ಲಿದೆ ಧರ್ಮ? ಜೇಬಿನಲ್ಲಿದ್ದ ಚಿಲ್ಲರೆ ಧರ್ಮ (ಹಣ) ಖಾಲಿಯಾಗಿ ಕಾಲವಾಗಿತ್ತು. ನಾನಂತು ಮೊದಲು ನನ್ನ wallet ಇದೆಯೋ ಇಲ್ಲವೋ ಅಂತ ಖಚಿತಪಡಿಸಿಕೊಂಡೆ. ಕಾಕಾ ಹೇಗೋ ಅಲ್ಲಿಂದ ತಪ್ಪಿಸಿಕೊಂಡರು. ಅಲ್ಲಿಂದ ಪಾರಾಗಲು ತಿಣುಕಾಡುತ್ತಿದ್ದೆ. ತಕ್ಷಣ ಒಂದು ಉಪಾಯ ಹೊಳೆಯಿತು. ಎಲ್ಲರಿಗೂ ಕ್ಯಾಮರ ತೋರಿಸಿದೆ. "ಸ್ವಲ್ಪ ದೂರ ಸರಿದು ನಿಂತ್ಕೊಳ್ಳಿ ನಿಮ್ಮ ಫೋಟೊ ತೆಗೆದು ಪೇಪರ್ ಅಲ್ಲಿ ಹಾಕಬೇಕು" ಅಂದೆ. ತಕ್ಷಣ "ಅಣ್ಣ ನನ್ನ ಪೋಟು (ಫೋಟೋ), ನನ್ ಪೋಟು" ಅಂತ ಸ್ವಲ್ಪ ದೂರ ಸರಿದರು. ನಿಟ್ಟುಸಿರು ಬಿಟ್ಟೆ. ಫೋಟೊ ತೆಗೆದು ಧರ್ಮ ಮಾಡದಿದ್ದರೆ ಹಿಡಿದು ಹೀಯಾಳಿಸಿಯಾರು ಅಂತ, ಜೇಬಿನಲ್ಲಿದ್ದ ೧೦ ರೂಪಾಯಿ ನೋಟನ್ನು ಅಲ್ಲಿದ್ದ ಒಬ್ಬ ಮಹಾಶಯನಿಗೆ ಕೊಟ್ಟು ಚಿಲ್ಲರೆ ಪಡೆದೆ. ಫೋಟೊ ತೆಗೆದು ಉಳಿದಿದ್ದ ಚಿಲ್ಲರೆ ಹಣವನ್ನೆಲ್ಲ ದಾನ ಮಾಡಿದೆ. ಸಾಕಾಗಬೇಕಲ್ಲ ಎಲ್ಲರಿಗೂ! ಹೇಗೋ ತಪ್ಪಿಸಿಕೊಂಡೆ.ಮುಂದುವರಿಯುವುದು.....
ನೋಡಿ: ಭಾಗ ೪

Republic Day Wishes

Saturday, January 26, 2008


Humko kitne Taj Mahal hain aur banane
Kitne hi Ajanta humko aur sajane
Abhi palatna hain rukh kitne dariyaon ka
Kitne parbat raho se hain aaj hatane
Hum Hindustani


ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೨

Monday, January 21, 2008

( ನೋಡಿ: ಭಾಗ ೧)

ಮೈಲಾಪುರದ ಬೆಟ್ಟದ ದಾರಿ ಇನ್ನೂ ಮುಗಿದಿರಲಿಲ್ಲ. ಕೊನೆಯಿಲ್ಲದ ಭಿಕ್ಷುಕರ ಸಾಲು, ಜಾನಪದ ಹಾಡುಗಳನ್ನು ಹಾಡುವ ಭಕ್ತರು, ಗೊರವರು, ಸಾಧುಗಳು, ಪೂಜಾರಿಗಳು, ಭಂಡಾರದ ತಿಲಕವನ್ನಿಡುವ ಭಕ್ತರು, ಹೀಗೆ ಹಲವರನ್ನು ಕುತೂಹಲದಿಂದ ನೋಡಿದೆ. ಪ್ರತಿಯೊಬ್ಬರ ಬದುಕಿನ ಹಿಂದೆ ಶತಶತಮಾನಗಳ ಕಥೆಯಿದೆ, ಹೃದಯ ವಿದ್ರಾವಕ ನೋವಿನ ಗಂಟಿದೆ. ತಲೆತಲಾಂತರದಿಂದ ಬಂದ ಅವರ ಮೂಢ ನಂಬಿಕೆ ಅವರ ಬದುಕೆಂಬ ಕುದುರೆಗೆ ಚಾಟಿಯಂತೆ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯವಿದ್ದರೂ ತಮ್ಮ ಅಂತರಂಗದ ಇಚ್ಚಾನುಸಾರವಾಗಿ ಬದುಕುವ ಸ್ವಾತಂತ್ರ್ಯವಿಲ್ಲ. ಒಟ್ಟಿನಲ್ಲಿ, ಒಬ್ಬ ದೇವರಿದ್ದಾನೆ, ಅವನನ್ನೊಲಿಸಿಕೊಳ್ಳಲು ತಾನು ಇದೇ ರೀತಿ ನಡೆದುಕೊಳ್ಳಬೇಕು, ಅವನೊಲಿದರೆ ಸ್ವರ್ಗ, ಇಲ್ಲದಿದ್ದರೆ ನರಕ ಎಂಬ ಗಾಢವಾದ ನಂಬಿಕೆ. ಸಂಪ್ರದಾಯ ಸಂಸ್ಕೃತಿಗಳಿಗೆ ಕಟ್ಟುಬಿದ್ದು ತಮ್ಮ ಜೀವನವನ್ನು 'ಇದೇ' ರೀತಿ ನಡೆಸಬೇಕಂಬ ವಿಚಾರಹೀನ ನಿರ್ಣಯ ಅವರ ಬದುಕನ್ನು ಶೋಚನೀಯ ಪರಿಸ್ಥಿತಿಗೆ ಗುರಿಪಡಿಸಿದೆ.


ಇಂತಹ ಹಲವಾರು ವಿಚಾರಗಳನ್ನು ಹೊತ್ತುಕೊಂಡು ಬೆಟ್ಟ ಹತ್ತುತ್ತಾ ಮುಂದೆ ಸಾಗಿದೆ. ಸಿಕ್ಕಾಪಟ್ಟೆ ವಯಸ್ಸಾದರೂ ಹದಿವಯಸ್ಸಿನ ಹುಡುಗಿಯಷ್ಟೇ ಚುರುಕಾದ "ದೇವದಾಸಿ" ಅಜ್ಜಿಯನ್ನು ಕಂಡೆ. ದೇವದಾಸಿಯರ ಜೀವನ ಶೈಲಿಯ ಕಥೆಯನ್ನು ಕಾಕಾನಿಂದ ಮೊದಲೇ ತಿಳಿದಿದ್ದೆ. ಈ ಅಜ್ಜಿ ಚಿಕ್ಕ ವಯಸ್ಸಿನವಳಾಗಿದ್ದಾಗಲೇ ಅವಳ ತಂದೆ ತಾಯಿಗಳು ಅವಳನ್ನು ಸವದತ್ತಿ ಎಲ್ಲಮ್ಮನಿಗೆ ಧಾರೆಯೆರೆದರು. ಅಂದರೆ ಅವಳನ್ನು ದೇವದಾಸಿಯನ್ನಾಗಿ ಮಾಡಿದರು. ದೇವದಾಸಿಯರು ವಯಸ್ಸಿಗೆ ಬಂದಾಗ, ಊರಿನಲ್ಲಿ ಯಾರದರೊಬ್ಬರು ಅವಳ "ಉಡಿ ತುಂಬುತ್ತಾರೆ". ಅಂದರೆ, ಒಂದು ದಿನದ ಮಟ್ಟಿಗೆ ಅವಳನ್ನು ಮದುವೆಯಾಗಿ, ಅವಳ ಜೊತೆ ದೈಹಿಕ ಸಂಭಂಧ ಬೆಳೆಸಿ, ಅವಳಿಗೆ ಸಂತಾನದ ಭಾಗ್ಯವನ್ನು ಕೊಡುವುದು. ಹೀಗೆ ದೇವದಾಸಿಯರನ್ನು ಯಾರಾದರು ಉಡಿ ತುಂಬಿದ ಮೇಲೆ, ಅವಳನ್ನು ಯಾರಾದರೂ ವರಿಸಬಹುದು (ಅಂಗೀಕರಿಸಬಹುದು)! ಅಂದರೆ ಅವಳ ಮುಂದಿನ ಬದುಕು ವೇಶ್ಯಯಂತೆ. ಅವಳು ಜೀವನ ಪೂರ್ತಿ ಎಲ್ಲಮ್ಮನ ಹೆಸರಿನಲ್ಲಿ ಭಿಕ್ಷೆ ಬೇಡುತ್ತ, ಎಲ್ಲಮ್ಮನನ್ನು ಆರಾಧಿಸುತ್ತ, ವೇಶ್ಯಯ ಜೀವನವನ್ನು ಕಳೆಯುವುದು. ಯಾರು ಬೇಕಾದವರ ಮಕ್ಕಳಿಗೆ ತಾಯಿಯಾಗುವುದು. ಆ ಮಕ್ಕಳ ಪಾಲನೆಯ ಭಾರ ಕೂಡ ದೇವದಾಸಿಯರ ಮೇಲೆಯೆ! ಇದೂ ಸಹ ಶ್ರೀಮಂತ ಸಂಸ್ಕೃತಿಯ ಕ್ರೂರ ಹಿನ್ನೆಲೆ!


ಸರಕಾರ ದೇವದಾಸಿ ಪದ್ಧತಿ ಕಾನೂನು ಬಾಹಿರ ಎಂದು ಘೋಶಿಸಿದರೂ, ಈ ಪದ್ಧತಿ ವ್ಯಾಪಕವಾಗಿ ಇನ್ನೂ ಉಳಿದಿದೆ. ಸವದತ್ತಿಯ ಸುತ್ತಮುತ್ತಲಂತೂ ಕಿಂಚಿತ್ತೂ ಬದಲಾಗಿಲ್ಲ. ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಲು ಹಲವಾರು ಸಂಘಸಂಸ್ಥೆಗಳು ಮುಂದೆ ಬಂದಿವೆ. ಆದರೂ ಈ ಪದ್ಧತಿಯ ನಿರ್ಮೂಲನೆ ಸಾಧ್ಯವಾಗುತ್ತಿಲ್ಲ. ಯಾಕೆ? ಜನರಿಗೆ ಈ ಹೀನ ಪದ್ಧತಿಯಲ್ಲಿ ಇನ್ನೂ ನಂಬಿಕೆಯಿದೆ. ಜನರ ಮಾನಸಿಕ ಪರಿಕಲ್ಪನೆ (mind set) ಬದಲಾಗಬೇಕು. ಹೇಗೆ? ಶಿಕ್ಷಣ, ಸಂಘಟನೆಯಿಂದ ಸಾಧ್ಯ. ದೇವದಾಸಿ ಮಹಿಳೆಯರ ಸಂಘಗಳಿದ್ದರೂ ಎಲ್ಲಾ ದೇವದಾಸಿಯರು ಅಂತಹ ಸಂಘಗಳಲ್ಲಿಲ್ಲ. ಸರಕಾರ ಮತ್ತು ಸಮಾಜ ಇಂತಹ ಸಂಘಗಳನ್ನು ಬಲಪಡಿಸಿ, ದೇವದಾಸಿಯರಿಗೆ ಸೂಕ್ತ ಶಿಕ್ಷಣ, ಅವಕಾಶಗಳನ್ನು ಕಲ್ಪಿಸಬೇಕು. ಅಂದಾಗ ಮಾತ್ರ, ಈ ತಲೆಮಾರಲ್ಲದಿದ್ದರೂ, ಮುಂದಿನ ತಲೆಮಾರಿನಲ್ಲಾದರೂ, ದೇವದಾಸಿ ಪದ್ಧತಿಯನ್ನು ನಿರ್ಮೂಲನೆಗೊಳಿಸಬಹುದು. ಒಂದು ರೀತಿಯಲ್ಲಿ ಬಡತನ ಮತ್ತು ಅನಕ್ಷರತೆ ಪ್ರತಿಯೊಂದು ಸಮಸ್ಯಯ ಬೇರುಗಳೆನ್ನಬಹುದು. ಸಂಸ್ಕೃತಿ, ಸಂಪ್ರದಾಯಗಳಿಗೆ ಸಂಭಂದಿಸಿದ ಮೂಢನಂಬಿಕೆಗಳ ಮೂಲ ಅನಕ್ಷರತೆ ಮತ್ತು ಬಡತನ. ಎಲ್ಲಿ ವಿದ್ಯ ಒಬ್ಬ ವ್ಯಕ್ತಿಯ ಮನಸ್ಸನ್ನು ಆವರಿಸಿರುತ್ತದೆಯೋ ಅಲ್ಲಿ ಅರ್ಥಹೀನ ಆಚಾರ ವಿಚಾರಗಳಿಗೆ ಅವಕಾಶವಿರುವುದಿಲ್ಲ.


ಬೆಟ್ಟದ ತುದಿ ಸಮೀಪಿಸುತ್ತಿದ್ದಂತೆ ಭಿಕ್ಷುಕರ ಸಂಖ್ಯೆ ಮತ್ತಷ್ಟು ಹೆಚ್ಚಿತು. ಚಿಲ್ಲರೆ ಹಣವೆಲ್ಲ ಮೊದಲೇ ಖಾಲಿಯಾಗಿತ್ತು. ಚಿಲ್ಲರೆ ಇಲ್ಲ ಅಂದರೆ, "ನೋಟು ಕೊಡು, ಚಿಲ್ಲರೆ ಕೊಡುತ್ತೇನೆಂಬ" ಭಿಕ್ಷುಕರ ಚಪಲ ಗೊತ್ತೆ ಇತ್ತು. ಮನಸ್ಸಿನ ಯಾವುದೋ ಮೂಲೆಯಲ್ಲಿ ದುಡ್ಡು ಕೊಡಬೇಕೆಂದು ಅನಿಸಿದರೂ, ಕೊಡುವ ಗೋಜಿಗೆ ಹೋಗಲಿಲ್ಲ. ಎಷ್ಟು ಕೊಟ್ಟರೂ, ನನ್ನ ಹಣ ಯಾರನ್ನೂ ಉದ್ಧಾರ ಮಾಡಲಾಗುವುದಿಲ್ಲ ಅನ್ನಿಸಿಬಿಟ್ಟಿತು. ಅತ್ತ ಇತ್ತ ನೋಡುತ್ತ ನೋಡುತ್ತ ಮುಂದೆ ಸಾಗುವಾಗ ಬೆಟ್ಟದ ತುದಿಯಲ್ಲಿ ಜನ್ಮ ಪೂರ್ತಿ ಮರೆಯಲಾಗದ ಘಟನೆಯೊಂದನ್ನು ಕಂಡೆ. ಭಿಕ್ಷುಕರಲ್ಲಿದ್ದ ಒಬ್ಬ ಅಜ್ಜಿಗೆ ಯಾರೊ ಬಂದು ಹೋಳಿಗೆ(ಒಬ್ಬಟ್ಟು) ಮತ್ತು ಪಲ್ಯಾ (ಸಬ್ಜಿ) ಕೊಟ್ಟರು. ಅವಳು ಹೋಳಿಗೆಯನ್ನು ಬುಟ್ಟಿಯಲ್ಲಿಟ್ಟುಕೊಂಡು, ಅತ್ತಿತ್ತ ನೋಡಲಾರಂಬಿಸಿದಳು. ಮೆಟ್ಟಿಲುಗಳ ಪಕ್ಕದಲ್ಲಿ ಸಿಕ್ಕಾಪಟ್ಟೆ ಧೂಳು, ಭಂಡಾರ ಬಣ್ಣದ ಕಸದ ರಾಶಿಯಿತ್ತು. ಅದರಲ್ಲಿ ಒಂದು ಪ್ಲಾಸ್ಟಿಕ್ ಚೀಲ ಕೂಡ ಬಿದ್ದಿತ್ತು. ಪ್ಲಾಸ್ಟಿಕ್ ಚೀಲ ಕಣ್ಣಿಗೆ ಬೀಳುತ್ತಲೆ ಅಜ್ಜಿ ಅದರತ್ತ ಕೈಹಾಕಿ ಎಳೆದುಕೊಂಡಳು, ಅದಕ್ಕೆ ಹತ್ತಿದ್ದ ಧೂಳು, ಕಸ, ಸ್ವಲ್ಪ ಕೆಸರನ್ನು ಝಾಡಿಸಿ ಅದರೊಳಗೆ ಯಾರೋ ಒಬ್ಬರು ಕೊಟ್ಟ ಆ ಪಲ್ಯಾವನ್ನು (ಸಬ್ಜಿಯನ್ನು) ಹಾಕಿ, ಅದನ್ನು ತನ್ನ ಸೀರೆಯ ಸೆರಗಿನಲ್ಲಿ ಕಟ್ಟಿಕೊಂಡಳು. ಮನುಷ್ಯನಿಗೆ ಹಸಿವು ಎಷ್ಟು ಘೋರವಾದದ್ದು ಅಲ್ಲವೇ? ಹೊಟ್ಟೆಗಾಗಿ ಒಬ್ಬ ಮನುಷ್ಯ ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದಲ್ಲವೇ? Luxurious ಹೊಟೇಲಿನ ಊಟದಲ್ಲಿ ಒಂದು ಕಸದ ಕಡ್ಡಿ ಕಂಡರೆ ಸಾಕು, ತಟ್ಟೆಯಲ್ಲಿದ್ದ ಎಲ್ಲವನ್ನು ಬದಲಿಸುತ್ತೇವೆ. ಆದರೆ ಈ ಅಜ್ಜಿ.....? ಎಂತಹ ಘೋರ ಸತ್ಯ ಅಲ್ಲವೆ?

ಅಂತೂ ಬೆಟ್ಟವನ್ನು ಹತ್ತಿ ಗುಡಿಯ ದ್ವಾರಬಾಗಿಲಿನಲ್ಲೆ ಸ್ವಲ್ಪ ಹೊತ್ತು ಕುಳಿತು, ನಡೆದ ಘಟನೆಗಳನ್ನೆಲ್ಲ ಮೆಲುಕು ಹಾಕುತ್ತಿದ್ದೆ. ಈ ಜಾತ್ರೆಯಲ್ಲಿ ಇನ್ನೊಂದು ವಿಷೇಶತೆಯಿದೆ. ಸರಪಳಿ ಕಡೆಯುವುದು. ಒಂದು ಕಲ್ಲಿಗೆ ಸರಪಳಿಯನ್ನು ಕಟ್ಟಿ, ಅದನ್ನು ಒಬ್ಬ ಮುದಿ ಪೂಜಾರಿ ಎಳೆಯುತ್ತಾನೆ, ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗಾಗಿ ಸರಪಳಿ ತುಂಡಾಗಿರುತ್ತದೆ! ಆನೆಯೂ ಸಹ ಕಡಿಯಲಾಗದ ಸರಪಳಿಯನ್ನು ಒಬ್ಬ ವಯಸ್ಸಾದ ಪೂಜಾರಿ ತುಂಡು ಮಾಡುತ್ತಾನೆ. ಮೊದಲು ಈಟಿವಿ(E TV) ಯವರು ಇದರ ಸತ್ಯವನ್ನು ತಿಳಿಯಲು ಹಲವಾರು ಪ್ರಯೋಗಳನ್ನು ಮಾಡಿ 'ಸರಪಳಿ ಕಡೆಯುವ' ಘಟನೆಯನ್ನು ಸುಳ್ಳು ಎಂದು ಸಾಧಿಸಲು ವಿಫಲರಾಗಿದ್ದರಂತೆ. ಈ ಘಟನೆ ನಡೆಯುವುದು ಜಾತ್ರೆಯ ದಿನ ಮಾತ್ರ. ಜಾತ್ರೆಯ ದಿನ ಬಿಟ್ಟು ಯಾವುದೆ ದಿನದಲ್ಲಿ ಸರಪಳಿ ಕಡೆಯಲು ಪ್ರಯತ್ನಿಸಿದರೆ (ಅದೇ ಪೂಜಾರಿಯಿಂದ!) ಸಾಧ್ಯವೇ ಆಗುವುದಿಲ್ಲವಂತೆ! ಸರಪಳಿ ಕಡೆಯುವುದನ್ನು ನೋಡಲೇ ಬೇಕೆಂದು ತೀರ್ಮಾನಿಸಿದೆ. ಅದು ಅಷ್ಟೊಂದು ಸುಲಭವಲ್ಲ. ಕಿಕ್ಕಿರಿದ ಜನರಾಶಿಯಲ್ಲಿ ಕ್ಷಣಾರ್ಧದಲ್ಲಿ ಮುಗಿಯುವ ಘಟನೆಯನ್ನು ನೋಡುವುದು ಸುಲಭವಲ್ಲ. ಗುಡಿಯ ಒಳಗೆ ಸಿಕ್ಕಾಪಟ್ಟೆ rush. ಹೋಗಲು ಸಾದ್ಯವೇ ಇರಲಿಲ್ಲ. ಗುಡಿಯ ದ್ವಾರದಲ್ಲಿ ನಿಂತಿದ್ದ ಪೋಲಿಸ್ ಮಾಮಾನನ್ನು ಮಾತನಾಡಿಸಿ, ಅವನದೊಂದು ಫೋಟೊ ತೆಗೆದೆ, ಅವರ ಜೊತೆ ಹಾಗೆ ಮಾತನಾಡುತ್ತ ನನ್ನ ಪರಿಚಯ ಕೂಡ ಮಾಡಿಕೊಂಡೆ. ಸರಪಳಿ ಕಡೆಯುವುದನ್ನು ನೋಡುವ ಬಯಕೆಯನ್ನು ತೋಡಿಕೊಂಡೆ. ಒಪ್ಪಿಕೊಂಡರು!!


ಬೆಟ್ಟ ಹತ್ತುವ ದಾರಿಯ ಮಧ್ಯದಲ್ಲಿ ಒಂದು ಕಲ್ಲಿನ ಕಂಬವಿದೆ. ಅದನ್ನು ಬೆಟ್ಟ ಹತ್ತುವಾಗಲೇ ನೋಡಿದ್ದೆ, ಪೋಲಿಸ್ ಮಾಮಾನ ಜೊತೆ ಮತ್ತೆ ಅಲ್ಲಿಗೆ ಬಂದೆ. ಅವರು ನನ್ನನ್ನು ಕಿಕ್ಕಿರಿದ ಜನಸಮೂಹದಲ್ಲಿ ಅತ್ಯಂತ ಸಮೀಪಕ್ಕೆ ಕರೆದೊಯ್ದರು. ನನಗೆ ಎಲ್ಲವೂ ಸ್ಪಷ್ಟವಾಗಿ ಕಾಣುವಂತಿದ್ದ ಜಾಗವದು. ಒಬ್ಬರ ಮೇಲೊಬ್ಬರು ಬೀಳುತ್ತಿದ್ದರೂ, ನನಗೆ ಫೋಟೊ ತೆಗೆಯುವ ಚಪಲ ಬೇರೆ. ಹೇಗಾದರು ಮಾಡಿ ಆ ಕ್ಷಣಾರ್ಧ ಘಟನೆಯ ಫೋಟೊ ತೆಗೆಯಬೇಕೆಂದುಕೊಂಡೆ. ಮೈಲಾರ ಮಲ್ಲಯ್ಯನ ಪಲ್ಲಕ್ಕಿ ಆ ಜಾಗಕ್ಕೆ ಬಂದ ಮೇಲೆ ಸರಪಳಿ ಕಡೆಯುವ ಕಾರ್ಯ. ಪಲ್ಲಕ್ಕಿ ಬರಲು ಇನ್ನು ಅರ್ಧ ಗಂಟೆ ಇತ್ತು. ಯಾರೊ ಒಬ್ಬ ಪೋಲಿಸರು 'ಹಿಂದಕ್ಕೆ ಸರಿ' ಎಂದು ಲಾಠಿ ಎತ್ತಿದರು! ಸದ್ಯ, ಅಷ್ಟರಲ್ಲಿ ಮೊದಲೇ ಪರಿಚಯವಾಗಿದ್ದ ಪೋಲಿಸ್ ಮಾಮಾ ಬಂದು, "ಹೇಯ್ ಅವರು ನಮ್ಮವ್ರ್ ಅದಾರ", ಅಂದ. ಲಾಠಿ ಏಟು ತಪ್ಪಿತು. ನಾನು ಮತ್ತು ನನ್ನ ಕ್ಯಾಮರಾ ಬದುಕಿಕೊಂಡೆವು. ಎಲ್ಲಿ ನೋಡಿದರಲ್ಲಿ ಭಂಡಾರದ್ದೇ (ಹಳದಿ ಬಣ್ಣ) ವೈಭವ. ಜನರು ಚೀಲದಲ್ಲಿ ಭಂಡಾರವನ್ನು ತುಂಬಿಕೊಂಡು ಎಲ್ಲೆಂದರಲ್ಲಿ ಎರಚುತ್ತಿದ್ದರು. ಮೈಮೇಲೆ ಭಂಡಾರ ಬಿದ್ದರೂ ಚಿಂತೆಯಿಲ್ಲ ಕ್ಯಾಮೆರಾದ ಮೇಲೆ ಮಾತ್ರ ಬೀಳಬಾರದು ಎಂದು ಮಲ್ಲಯ್ಯನಲ್ಲಿ ಪ್ರಾರ್ಥಿಸುತ್ತಿದ್ದೆ. ಅತ್ತಿತ್ತ ಫೋಟೊ ಕ್ಲಿಕ್ಕಿಸುತ್ತ ಅರ್ಧ ಗಂಟೆ ಕಳೆದೆ. ಪಲ್ಲಕ್ಕಿ ಸಮಯಕ್ಕೆ ಸರಿಯಾಗಿ ಬಂತು. ಅಲ್ಲಿದ್ದ ಪೂಜಾರಿಯೊಬ್ಬ ಸರಪಳಿಯನ್ನು ಎಲ್ಲರಿಗೂ ತೋರಿಸಿದ. ತುಂಬಾ ಗಟ್ಟಿಯಾದ, ಬಲವಾದ ಸರಪಳಿಯದು. ಎಲ್ಲರೂ ಮೈಲಾರಲಿಂಗನ ಜಯಕಾರ (ಏಳ್ ಕೋಟಿ ಏಳ್ ಕೋಟಿಗೆ ಅಂತ, ಹಿಂದೆ ಮೈಲಾರಲಿಂಗ ಶ್ರೀಮಾನ್ ವೆಂಕಟರಮಣನಿಗೆ ಏಳು ಕೋಟಿ ರೂಪಾಯಿ ಸಾಲ ಕೊಟ್ಟಿದ್ದನಂತೆ, ವೆಂಕಟರಮಣ ದೇವರು ಅದನ್ನು ಮೈಲಾರಲಿಂಗನಿಗೆ ವಾಪಸ್ ಕೊಡಲೇ ಇಲ್ಲವಂತೆ, ಅದಕ್ಕೆ ವೆಂಕಟರಮಣ ದೇವರಿಗೆ ಜನ "ಗೊವಿಂದ, ಗೋssssವಿಂದ" ಎನ್ನುವರಂತೆ, ಏಳು ಕೋಟಿ ಸಾಲ ಕೊಟ್ಟ ಸರದಾರ ಮಲ್ಲಯ್ಯನಿಗೆ, "ಏಳ್ ಕೋಟಿ ಏಳ್ ಕೋಟಿಗೆ" ಎನ್ನುವ ಜೈಕಾರ) ಹಾಕಿದರು. ಮುದಿವಯಸ್ಸಿನ ಪೂಜಾರಿಯೊಬ್ಬ ಪಲ್ಲಕ್ಕಿಯನ್ನು ನಮಸ್ಕರಿಸಿ, ಸರಪಳಿಯತ್ತ ಧಾವಿಸಿದ, ಕ್ಯಾಮರ ಕ್ಲಿಕ್ಕಿಸಲು ನಾನು ರೆಡಿಯಾದೆ. ಸರಪಳಿಯನ್ನು ನಮಿಸಿ, "ಏಳ್ ಕೋಟಿ ಏಳ್ ಕೋಟಿಗೆ" ಅಂತ ಸರಪಳಿಯನ್ನು ಎಳೆದ. ಸರಪಳಿ ಎರಡು ಭಾಗವಾಯಿತು!! ಎಂತಹ ಅದ್ಭುತ! ಫೋಟೊ ಕ್ಲಿಕ್ಕಿಸುವಷ್ಟರಲ್ಲಿ ಯಾವನೋ ಒಬ್ಬ ಕೈ ತಾಗಿಸಿಬಿಟ್ಟ, ನೆಲಕ್ಕೆ ಬೀಳುತ್ತಿತ್ತು ನನ್ನ ಕ್ಯಾಮೆರ! ಸದ್ಯ, ಯಾರೋ ಒಬ್ಬರು ಅದನ್ನು ಹಿಡಿದು ನನ್ನ ಕೈಗೆ ಕೊಟ್ಟರು. ತಕ್ಷಣ ಇನ್ನೊಂದು ಫೋಟೊ ತೆಗೆದೆ. ಪೂಜಾರಿ ಸಿಕ್ಕ ನನ್ನ ಕ್ಯಾಮರಾದಲ್ಲಿ!ಪೋಲಿಸ್ ಮಾಮಾರಿಗೆ ವಂದನೆಗಳನ್ನು ಸಲ್ಲಿಸಿ, ಮತ್ತೊಂದು ಫೋಟೊ ತೆಗೆದು, ಭಂಡಾರಕ್ಕೆ ಹೆದರಿ ಜಾತ್ರೆಯ ಹೊರಗಿನ ಹೊಲದಲ್ಲಿ ಕುಳಿತಿದ್ದ ಕಾಕಾನ ಕಡೆ ನಡೆದೆ. ಜನ ಎಷ್ಟೊಂದು ಕಿಕ್ಕಿರಿದಿತ್ತೆಂದರೆ, ಮುಂಬಯಿ ಲೋಕಲ್ ರೈಲಿನ ಬಾಗಿಲಿನಲ್ಲಿರುವ ಜನರಿಗಿಂತ ಎಷ್ಟೋ ಪಟ್ಟು ಜಾಸ್ತಿ! ಸುಮ್ಮನೆ ಜನರ ಮಧ್ಯದಲ್ಲಿ ನಿಂತರೆ ಸಾಕು, ಜನರೇ ನಮ್ಮನ್ನು ದೂಡಿಕೊಂಡು ಹೊರಗೆ ಕರೆದೊಯ್ಯುತ್ತಾರೆ! ಸುಮಾರು ಅರ್ಧ ಕಿಲೋ ಮೀಟರ್ ಇದ್ದ ಇಂತಹ ಜನದಟ್ಟನೆಯ ದಾರಿ ಅಪೂರ್ವ ಅನುಭವ ಕೊಟ್ಟಿತು. ಅಂತೂ ಬದುಕಿಕೊಂಡು ಜಾತ್ರೆಯ ಹೊರಗೆ ಬಂದೆ. ದಾರಿಯಲ್ಲಿ ಕಬ್ಬು (sugar cane) ಖರೀದಿಸಿ ತಿನ್ನುತ್ತಾ ಕಾಕಾ ಇದ್ದ ಜಾಗಕ್ಕೆ ಬಂದೆ. ಕಾಕಾನಿಂದ ಜಾತ್ರೆಯ ಬಗ್ಗೆ ಮತ್ತಷ್ಟು ವಿಷಯಗಳನ್ನು ತಿಳಿದುಕೊಂಡು ಸ್ವಲ್ಪ ಕಾಲ ಕಳೆದೆ. ಒಂದೆರಡು ಗಂಟೆಯ ನಂತರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಜನದಟ್ಟಣೆ ಕಡಿಮೆಯಾಯಿತು. ದೇವರ ದರ್ಶನವನ್ನಾದರೂ ಮಾಡೋಣವೆಂದು ಎಲ್ಲರೂ (ನಾನು, ಕಾಕಾ ಮತ್ತು ಅವನ ಸ್ನೇಹಿತ ಲೋಕನಾಥ ಸರ್) ಬೆಟ್ಟದ ಮೇಲಿರುವ ಗುಡಿಯ ಕಡೆ ಹೊರಟೆವು.ಮುಂದುವರಿಯುವುದು........
ನೋಡಿ: ಭಾಗ ೩

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೧

ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮ ಚಂತನಾ ಪ್ರಪಂಚ ಎಷ್ಟೊಂದು ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ ಸಿಕ್ಕಿರಲಿಲ್ಲ. ಹೊಸ ವರ್ಷದ ಹೊಸ್ತಿಲಲ್ಲೇ ಆ ಆಸೆ ಈಡೇರಬಹುದು ಅಂತ ಊಹೆ ಕೂಡ ಮಾಡಿರಲಿಲ್ಲ. ಒಂದು ವಾರ ಕೆಲಸದಿಂದ ರಜೆ ಗಿಟ್ಟಿಸಿಕೊಂಡು ಆದಷ್ಟು ಊರುಗಳಿಗೆ ಭೆಟ್ಟಿಕೊಟ್ಟೆ. ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ ನಾಚಿಕೆ ದಿನೆ ದಿನೆ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ಹತ್ತು ದಿನಗಳ ಅಲೆದಾಟ ಅವಿಸ್ಮರಣೀಯವಾದರೂ, ಅಪೂರ್ವ ಅನುಭವ ಸಿಕ್ಕಿದ್ದು ಮೈಲಾಪುರದ ಜಾತ್ರೆಯಲ್ಲಿ .

ನಾನು, ಕಾಕಾ(ಚಿಕ್ಕಪ್ಪ, ಕನ್ನಡ ಉಪನ್ಯಾಸಕ) ಮತ್ತು ಕಾಕಾನ ಸ್ನೇಹಿತ, ಲೋಕನಾಥ ಸರ್. ಜಾತ್ರೆಗೆ ಹೋಗುವ ಮೊದಲೇ ಕಾಕಾನಿಂದ ಜಾತ್ರೆಗೆ ಸಂಬಂಧ ಪಟ್ಟ ಎಲ್ಲ ವಿಷಯಗಳನ್ನು ತಿಳಿದುಕೊಂಡಿದ್ದೆ. ಮೈಲಾಪುರದ (ಬೆಟ್ಟದ ಮೇಲಿರುವ) ದೇವರಾದ "ಮಲ್ಲಯ್ಯ / ಮೈಲಾರಲಿಂಗ", ಅಲ್ಲಿ ಬರುವಂತಹ ಜನ, ಅಲ್ಲಿ ನಡೆಯು ಎಲ್ಲ ಚಟುವಟಿಕೆಳು, ಅದರ ಐತಿಹಾಸಿಕ ಹಿನ್ನೆಲೆ, ಉದ್ದೇಶ, ಜನರ ನಂಬಿಕೆ ಇತ್ಯಾದಿ. ಸಮಯಕ್ಕೆ ಸರಿಯಾಗಿ, ಕಿಕ್ಕಿರಿದ ಬಸ್ಸಿನಲ್ಲಿ ಮೈಲಾಪುರ ತಲುಪಿದೆವು. ಎಲ್ಲಿ ನೋಡಿದರಲ್ಲಿ ಕುಂಕುಮ, ಭಂಡಾರ (ಅರಶಿಣ, ಹಳದಿ ಬಣ್ಣ) ದ್ದೆ ವೈಭವ, ಜಾತ್ರೆಯ ಒಳಹೊಕ್ಕರೆ ಸಾಕು ಹಣೆಯ ಮೇಲೆ ಭಂಡಾರದ ತಿಲಕವಿಡುವವರು ಸಾವಿರಾರು ಜನ. ಬೆಟ್ಟ ಹತ್ತುವಾಗಲಂತು ಜೈ ಕಾರ ಹಾಕುತ್ತ ಭಂಡಾರ ಚೆಲ್ಲುವವರು ಸಹಸ್ರಾರು ಮಂದಿ. ಕಾಕಾನಂತಹ ಕೆಲವರು ಆ ಭಂಢಾರದ ಬಣ್ಣಕ್ಕೆ ಹೆದರಿ ಕಳಗಿನಿಂದಲೇ ನಮಸ್ಕರಿಸಿ ಬಂದ ದಾರಿ ಹಿಡಿಯುವುದುಂಟು. ನನಗಂತೂ ಪ್ರತಿಯೊಂದನ್ನೂ ಅನುಭವಿಸುವ ಅವಸರ. ಕಾಕಾ ಮತ್ತು ಅವನ ಗೆಳೆಯನನ್ನು ಬೆಟ್ಟದ ಕೆಳಗೇ ಬಿಟ್ಟು ನಾನೊಬ್ಬನೇ ಹೋಗಲು ನಿರ್ಧರಿಸಿದೆ. ಬೆಟ್ಟ ಹತ್ತುತ್ತ ಹತ್ತುತ್ತ ನಾನು ನೋಡಿದ ಪ್ರತಿಯೊಂದು ಚಿತ್ರವೂ ಹೃದಯ ಹಿಂಡಿತು. ಜಗತ್ತಿನಲ್ಲಿ ಇನ್ನೂ ಹೀಗು ಉಂಟೆ ಅನಿಸಿತು. ನನಗೆ ಗೊತ್ತಿಲ್ಲದೆ ಕಣ್ಣೀರಿನ ಹನಿ ಕೆಳಗೆ ಬಿತ್ತು. ನನಗನಿಸಿದ್ದನ್ನು ಚಿತ್ರಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಪಡುತ್ತಿದ್ದೇನೆ, ಅನಿಸಿದ್ದನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಪ್ರಯತ್ನ ಪಟ್ಟಿದ್ದೇನೆ.ಬೆಟ್ಟದ ತಳದಿಂದ ತುದಿಯವರೆಗೂ ಸಾಲಾಗಿ ನಿಂತಿದ್ದ ಭಿಕ್ಷುಕರ ದಂಡು ನನ್ನನ್ನು ಅತ್ಯಂತ ನಮ್ರತೆಯಿಂದ ಸ್ವಾಗತಿಸಿತು. ಭಿಕ್ಷೆ ಹಾಕುತ್ತ ಹಾಕುತ್ತ ನನ್ನಲ್ಲಿದ್ದ ಚಿಲ್ಲರೆ ದುಡ್ಡು ಖಾಲಿಯಾಯಿತು. ಮುಂದೆ ನಿಂತಿದ್ದ ಅಜ್ಜಿಯೊಬ್ಬಳು, "ಮಗ, ಧರ್ಮ ಮಾಡು" ಅಂದಳು. "ಅಜ್ಜಿ, ಚಿಲ್ಲರೆ ಇಲ್ಲ, ಎಲ್ಲಾ ಕೊಟ್ಟು ಖಾಲಿಯಾಯಿತು" ಅಂದೆ. "ನೋಟ ಇದ್ರ ಕೊಡು, ನಾ ಚಿಲ್ಲರ್ ರೊಕ್ಕ ಕೊಡ್ತಿನಿ" ಅಂದಳು! ತಕ್ಷಣ ಮುಂಬಯಿ ಶಹರದಲ್ಲಿ ಇನ್ ಕಮ್ ಟ್ಯಾಕ್ಸ್ (Income Tax) ಕಟ್ಟುವ ಭಿಕ್ಷುಕನೊಬ್ಬನ ನೆನಪಾಯಿತು! ಮುಗುಳ್ನಕ್ಕು, "ನಿನ್ನಷ್ಟು ಶ್ರೀಮಂತ ನಾನಲ್ಲವಾ ತಾಯಿ" ಅಂತ ಅವಳಿಗೆ ನಮಸ್ಕರಿಸಿ, ಒಂದು ಫೋಟೊ ಕ್ಲಿಕ್ಕಿಸಿ ಮುನ್ನಡೆದೆ.ಸ್ವಲ್ಪ ಮುಂದೆ ಹೋಗಿ ಅತ್ತಿತ್ತ ನೋಡಿದೆ, ಒಬ್ಬ ಹುಡುಗ ಭಿಕ್ಷೆಯಲ್ಲಿ ಸಿಕ್ಕ ರೊಕ್ಕ ಎಣಿಸುತ್ತಿದ್ದ. ಅವನಿಗೆ ಗೊತ್ತಿಲ್ಲದ್ದೆ ಈ ಫೋಟೊ ತೆಗೆದೆ. ಅವನು ದುಡ್ದು ಕೊಡು ಅಂತ ಸಿಕ್ಕಾಪಟ್ಟೆ ಕಾಡಿದ. ಆದರೂ ತಾಳ್ಮೆಯಿಂದ ಅವನನ್ನು ಮಾತನಾಡಿಸಿದೆ. ಅವನು ಆವಾಗಾವಾಗ ಶಾಲೆಗೆ ಹೋಗುವುದನ್ನು ಕೇಳಿ ಸ್ವಲ್ಪ ಸಮಾಧಾನವಾಯಿತು. ಎಲ್ಲಾದರೂ ಜಾತ್ರೆಯಿದ್ದರೆ ಸಾಲ್ಕೈದು ದಿನ ಶಾಲೆಗೆ ಚಕ್ಕರ್. ಅವನು ತೊಟ್ಟ ಬಟ್ಟೆ ಶಾಲೆಯ ಸಮವಸ್ತ್ರ (uniform)! "ನಿನ್ನ ಹತ್ರ ಇಷ್ಟೊಂದು ರೊಕ್ಕ ಇದೆಯಲ್ಲ, ಏನ್ ಮಾಡ್ತಿ ಅದನ್ನ" ಅಂತ ಕೆಳಿದೆ. "ಫಸ್ಟು ಒಂದು ಜೋಡಿ ಅರಿಬಿ (ಬಟ್ಟೆ) ತೊಗೊತಿನಿ, ರೊಕ್ಕ ಉಳಿತು ಅಂದ್ರ ಒಂದು ಹೊಸ ಕಂಪಾಸ್ (geometry box) ತೊಗೋತಿನಿ" ಅಂದ! ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ಅವನೇನಾದರು ಇನ್ನು ಸ್ವಲ್ಪ ಕಷ್ಟ ಪಟ್ಟರೆ, ವಿದ್ಯಾವಂತನಾಗಿ ತನ್ನ ಮನೆಯ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆಂಬುದರಲ್ಲಿ ಸಂದೇಹವೇ ಇಲ್ಲ. ನನ್ನಲ್ಲಿದ್ದ ಒಂದು ಪೆನ್ (pen) ಕೊಡಲು ಹೋದೆ, "ಸಾರ್, ಪೆನ್ ಬ್ಯಾಡ, ರೊಕ್ಕ" ಅಂದ. ಚಿಲ್ಲರೆ ಇಲ್ಲಪಾ, ಇದೆ ಇಟ್ಕೊ ಅಂತ ಹೇಳಿ ಮುನ್ನಡೆದೆ.


ಬಲಕ್ಕೆ ತಿರುಗಿ ನೋಡಿದಾಗ ಅಲ್ಲಿ ಯಾವುದೋ ಊರಿಂದ ಬಂದ ಜಾತ್ರೆಯ ದಂಡು ಅಡುಗೆಯ ಕಾರ್ಯಕ್ರಮ ಶುರು ಹಚ್ಚಿಕೊಂಡಿತ್ತು. ಅತ್ತಿತ್ತ ತಿರುಗಾಡಿ ವಾಪಸ್ ಬೆಟ್ಟದ ಮೆಟ್ಟಿಲಿನ ಕಡೆ ಬರುವಾಗ ಚಿತ್ರದಲ್ಲಿನ ಈ ಹುಡಿಗಿಯರನ್ನು ಫೋಟೊ ತೆಗೆಯಲಾ ಅಂತ ಕೇಳಿದಾಗ, ಒಬ್ಬ ಹುಡುಗಿ (ಎಡಕ್ಕಿರುವವಳು) "ಬ್ಯಾಡ" ಅಂತ ಮುಖ ಮುಚ್ಚಿಕೊಳ್ಳುತ್ತಿದ್ದಳು. ಓಹೋ! ಅಂತ ಹೊರಡುವ ಹಾಗೆ ನಾಟಕ ಮಾಡಿದೆ, ಅವಳು ತಿರುಗಿ ನೋಡುವಷ್ಟರಲ್ಲಿ ಈ ಫೋಟು ಕ್ಲಿಕ್ಕಿಸಿದೆ! ಎಂತಹ ಫೋಟೊಗ್ರಾಫಿ skill ಅಂತಿರ ನಂದು!ನಾಲ್ಕೈದು ಮೆಟ್ಟಿಲು ಮುಂದೆ ಹೋದೆ. ಚಿತ್ರದಲ್ಲಿರುವ ಒಬ್ಬ ಜೋಗಪ್ಪ (a transgender) ಯಾವುದೋ ಚಿಂತಯಲ್ಲಿ ಮಗ್ನನಾಗಿದ್ದ(ಳು). ಫೋಟೊ ಕ್ಲಿಕ್ ಮಾಡುವಷ್ಟರಲ್ಲಿ ನನ್ನ ಕಡೆ ತಿರುಗಿದ(ಳು). Picture perfect! ಜೋಗಪ್ಪ ಸವದತ್ತಿ ಎಲ್ಲಮ್ಮನ ಭಕ್ತ. ಸಾಮಾನ್ಯವಾಗಿ ಅವನನ್ನು "ಜೋಗ್ಯಾ, ಅಕ್ಕಲಗ್ಯಾ ಜೋಗ್ಯಾ" ಎಂಬ ಹೆಸರಿನಿಂದ ಕರೆಯುವುದು ವಾಡಿಕೆ. ಊರಿಂದ ಊರಿಗೆ ಸುತ್ತಾಡಿ, (ಕೈಯಲ್ಲಿ ಹಿಡಿದ) ತಂಬೂರಿ ಬಾರಿಸುತ್ತ ಭಿಕ್ಷೆ ಬೇಡಿಯೇ ಜೀವನ ಸಾಗಿಸಬೇಕು. ಆ ರೀತಿ ಮಾಡಿದಾಗಲೇ ಸವದತ್ತಿ ಎಲ್ಲಮ್ಮನಿಗೆ ತನ್ನ ಭಕ್ತಿ ಮುಟ್ಟುವುದು ಎಂಬ ನಂಬಿಕೆ. ಬೆಂಗಳೂರಿನಂತಹ ನಗರಗಳಲ್ಲಿ LesBITನಂತಹ (a new helpline for lesbians, bisexuals and transgenders in Bangalore city, LesBit helpline number is 080-23439124[source]) ಸಮಾಜ ಸೇವಕ ಸಂಸ್ಥೆಗಳು (NGOs), ಜೋಗಪ್ಪನಂತವರ ಏಳ್ಗೆಗಾಗಿ ದುಡಿಯುತ್ತಿರುವುದು ಮಾನವೀಯತೆ ದೃಷ್ಟಿಯಿಂದ ಅತ್ಯಂತ ಸಮಾಧಾನಕರ ವಿಷಯ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಾವಿರಾರು ಜೋಗಪ್ಪಗಳ ಬದುಕು ಇನ್ನೂ ಶೋಚನೀಯವಾಗಿದೆ. ಅವರೂ ಮನುಶ್ಯರು, ಅವರಿಗೂ ನಮ್ಮಂತೆ ಒಂದು ಬದುಕಿದೆ, ಅವರಿಗೂ ತಮ್ಮದೆ ಆದ ವಿಚಾರಗಳಿವೆ ಎಂಬ ಭಾವನೆ ಜನರಲ್ಲಿ ಕಿಂಚಿತ್ತೂ ಇಲ್ಲ. ಅವರನ್ನು ಕೀಳು ದೃಷ್ಟಿಯಿಂದ ನೋಡುವುದು ತಪ್ಪು ಎಂಬುದು ಯಾರ ಅರಿವಿಗೂ ಬರುವುದಿಲ್ಲ. ಮೈಲಾಪುರದಂತಹ ಜಾತ್ರೆಗಳಲ್ಲಿ ಇವರನ್ನು ಕಂಡು ಮೂಗು ಮುರಿಯುವರೆಷ್ಟು ಜನ? ಅವರನ್ನು ಕಂಡು ಹಿಯಾಳಿಸುವವರೆಷ್ಟು ಜನ? ಅವರ ಲಿಂಗವನ್ನು ಕುರಿತು ಚೇಷ್ಟೆ ಮಾಡುವವರೆಷ್ಟು ಜನ? ಯಾರಿಗೂ ಲೆಕ್ಕ ಸಿಗದು. ಇದೆಲ್ಲವನ್ನು ಸಹಿಸಿಕೊಂಡು, ಭಕ್ತಿಯೇ ಶ್ರೇಷ್ಟ, ಭಕ್ತಿಯಿಂದಲೇ ಬದುಕಿನ ಮುಕ್ತಿ ಎಂದು ನಂಬಿರುವ ಜೋಗಪ್ಪನ ಜೀವನ ಕೀಳೆಂದು ನಿಮಗನಿಸುವುದೇ?

ಚಿತ್ರದಲ್ಲಿರುವ ಅಜ್ಜ ಸಹ ಒಬ್ಬ ಜೋಗಪ್ಪ. ಆದರೆ ಇವನು ಮೊದಲಿನ ಜೋಗಪ್ಪನಿಗಿಂತ ಭಿನ್ನ. ಇವನು ತುಳಜಾಪುರದ ಅಂಬಾ ಭವಾನಿಯ ಭಕ್ತ, ಹೆಂಗಸರ ಬಟ್ಟೆ ಹಾಕುವವನನಲ್ಲ. ಕೆಂಪು ಅಂಗಿ, ಒಮ್ಮೊಮ್ಮೆ ಧೋತಿ, ಕೊರಳಲ್ಲಿ ಕವಡೆಯ ಸರ, ಕೈಯಲ್ಲಿ ಬುಟ್ಟಿ ಇವನ ಸಾಮಾನ್ಯ ವೇಶ. ಬುಟ್ಟಿಯಲ್ಲಿ ಅಂಬಾ ಭವಾನಿಯ ಮೂರ್ತಿಯಿದೆ (ಚಿತ್ರದಲ್ಲಿ ಕಾಣುತ್ತಿಲ್ಲ). ದೇವರ ಹೆಸರಿನಲ್ಲಿ ಭಿಕ್ಷೆ ಬೇಡುತ್ತ ಜೀವನ ಕಳೆಯುವುದೇ ಇವನ ಉದ್ಯೋಗ. ಭಕ್ತಿಯಿಂದಲೇ "ಈ ಪಾಪಿ ಜೀವನದ" ಮುಕ್ತಿ ಎಂಬ ಬಲವಾದ ನಂಬಿಕೆ ಇವನದು.


ಗೊರವರ ಮಧ್ಯದಲ್ಲಿ ನಾನು! ಈ ಚಿತ್ರದ ಹಿಂದೆ ಅತ್ಯಂತ ಕುತೂಹಲಕರವಾದ ಕಥೆಯಿದೆ. ಮೈಲಾಪುರದ ದೇವರಾದ ಮಲ್ಲಯ್ಯ, ಹಿಂದೆ, ಗಂಗೆಮಾಳಮ್ಮ ಎನ್ನುವಳನ್ನು ಪ್ರೀತಿಸುತ್ತಿದ್ದ. ಒಂದು ರೀತಿಯ affair ಅನ್ಕೋಬಹುದು! ಅವರಿಬ್ಬರ ಪ್ರೇಮ ನಿಷ್ಕಳಂಕವಾದುದಂತೆ. ಆದರೆ ಗಂಗೆಮಾಳಮ್ಮನ ಮನೆಯವರು ಮಲ್ಲಯ್ಯನ ಜೊತೆ ಗಂಗೆಮಾಳಮ್ಮನನ್ನು ಮದುವೆ ಮಾಡಲು ನಿರಾಕರಿಸಿದರು. ಅದಕ್ಕೆ ಮಲ್ಲಯ್ಯ ಮತ್ತು ಗಂಗೆಮಾಳಮ್ಮ ಗುಪ್ತವಾಗಿ ಮದುವೆಯಾಗಲು ತೀರ್ಮಾನಿಸಿದರು. ಅವರು ಗುಪ್ತವಾಗಿ ಮದುವೆಯಾಗುವಾಗ ಗಂಗೆಮಾಳಮ್ಮನ ಸಹೋದರರು ಆಯುಧಗಳ ಸಮೇತ ಮದುವೆಯನ್ನು ತಡೆಯಲು ಬಂದರಂತೆ. ಭಕ್ತಿಯ ಸ್ವರೂಪಳಾದ ಗಂಗೆಮಾಳಮ್ಮ ಅವರಿಗೆ "ನಾಯಿಯಂತೆ ಬದುಕಿರಿ" ಎಂಬ ಶಾಪವಿತ್ತಳು. ಶಾಪಕ್ಕೆ ತುತ್ತಾದ ಸಹೋದರರು, ನಾಯಿಯಂತಹ ಗುಣಗಳನ್ನು ಪಡೆದುಕೊಂಡರು. ಬೊಗಳುವುದು, ನಾಯಿಯಂತೆ ಶಬ್ದ ಮಾಡುವುದು, ಒಂದೇ ತಟ್ಟೆಯಲ್ಲಿ ತಿನ್ನುವುದು ಇತ್ಯಾದಿ. ಪುರಾಣದ ಈ ಸನ್ನಿವೇಶವನ್ನು ಅಮರವಾಗಿಸಲು ಗಂಗೆಮಾಳಮ್ಮನ ಸಹೋದರರ ವಂಶಸ್ಥರಾದವರು, ಇಂದಿಗೂ ಸಹ ನಾಯಿಯಂತಹ ಬದುಕನ್ನು ಸಾಗಿಸುತ್ತಿದ್ದಾರೆ! ಹೀಗೆ ಮಾಡಿದಾಗ ಮಾತ್ರ ಗಂಗೆಮಾಳಮ್ಮನ ಮದುವೆ ತಡೆದ ತಮ್ಮ ಪೂರ್ವಜರ ತಪ್ಪಿಗೆ ಕ್ಷಮೆ ಸಿಕ್ಕುವುದೆಂಬ ಬಲವಾದ ನಂಬಿಕೆ. ಇವರನ್ನು ಉತ್ತರ ಕರ್ನಾಟಕದಲ್ಲಿ "ವಗ್ಯಾಗಳು" ಎಂದೂ, ದಕ್ಷಿಣ ಕರ್ನಾಟಕದಲ್ಲಿ "ಗೊರವರು" ಎಂದು ಕರೆಯುವುದುಂಟು. ಚಿತ್ರದಲ್ಲಿರುವ ಗೊರವನ ಕೈಯಲ್ಲಿ (ಕೆಳಗಿನ ಚಿತ್ರ, ಎಡಗೈಯಲ್ಲಿ) ರುವ ತಾಮ್ರದ ತಟ್ಟೆಯನ್ನು "ಪಾನಪಾತ್ರೆ" ಎಂದು ಕರೆಯುವರು. ಅವರು ಪಾನಪಾತ್ರೆಯಲ್ಲೇ ಭಿಕ್ಷೆ ಬೇಡುವುದು, ಅದರಲ್ಲೇ ಊಟ ಮಾಡುವುದು, ಎಲ್ಲಾದರು ಚಹಾ ಕುಡಿಯಬೇಕಾದರೂ ಪಾನಪಾತ್ರೆಯಲ್ಲೇ!!

ನೋಡಲು ತುಂಬಾ ಕುತೂಹಲಕಾರಿಯಾದ ಗೊರವರ ವೇಷ ಭೂಷಣ ನನ್ನನ್ನು ಹಲವಾರು ಚಿಂತನೆಗಳಿಗೆ ಗುರಿ ಮಾಡಿತು. ಯಾವುದೋ ಕಾಲದಲ್ಲಿ ನಡೆದ ಘಟನೆಗೆ (ನಡೆದಿತ್ತೋ ಇಲ್ಲವೋ ಯಾರಿಗೆ ಗೊತ್ತು? ಅಥವ ಪುರಾಣದಲ್ಲಿ ಯಾವುದೋ ಕವಿ ಹಾಗೆ ಬರೆದ ತಪ್ಪಿಗೆ) ವೈಜ್ಞಾನಿಕ ಯುಗದಲ್ಲಿ ಇಂದಿಗೂ ಇವರ ಪರದಾಟ ತಪ್ಪಿದ್ದಲ್ಲ. ಅವರ ಬದುಕಿನ ಬಗ್ಗೆ ಯಾರಿಗೂ ಕರುಣೆಯಿಲ್ಲವೆ? ಮೈಲಾಪುರದ ಮಲ್ಲಯ್ಯನಿಗೂ ಇಲ್ಲವೆ? ಜಾನಪದ ಸಂಸ್ಕೃತಿಯನ್ನು ರಕ್ಷಿಸುವ ಭರದಲ್ಲಿರುವ ಸರಕಾರ ಮತ್ತು ಹಲವಾರು ಸಂಸ್ಥೆಗಳು ಇವರ ಬದುಕಿಗಾಗಿ ಏನಾದರು ಮಾಡಬಾರದೇ? ನಮ್ಮ ನಿಮ್ಮಂತೆ ಬದುಕುವ ದಾರಿಯನ್ನು ಕಲ್ಪಿಸಿಕೊಡಬಾರದೇ? ಜಗತ್ತಿನಲ್ಲೇ ಅತ್ಯಂತ ಶ್ರೀಮಂತವಾಗಿರು ಸಂಸ್ಕೃತಿಯ ಹಿಂದೆ ಇಂತಹ ಘೋರವಾದ ಬಡತನವಿದೆ ಎಂಬ ಸತ್ಯ ಅರಿಯುವುದು ಯಾವಾಗ??

ಮುಂದುವರೆಯುವುದು.....
ನೋಡಿ - ಭಾಗ ೨
 

Creative Commons License
This work by Manjunath Singe is licensed under a Creative Commons Attribution-Noncommercial-No Derivative Works 2.5 India License. The views and opinions expressed in this work are strictly those of the author and do not represent his employer's views in anyway.