ನಮ್ಮ ರತ್ನ Excellenಟು!

Wednesday, September 12, 2007

ಜೀವನ, ಭಾವನೆಗಳ ಒಂದು ಕೊನೆಯಿಲ್ಲದ ಸರಪಳಿ. ಮೊದಮೊದಲು ನಮ್ಮೆಲ್ಲರ ಭಾವನೆಗಳ ಮೂಲ ಯಾವುದು ಎಂಬುದರ ಪ್ರಶ್ನೆಯೊಂದನ್ನು ಮುಂದಿಟ್ಟುಕೊಂಡು "ಸ್ಪೂರ್ತಿ" ಎಂಬ ಲೇಖನವನ್ನು ಬರೆದಿದ್ದೆ [ಓದಲು ಇಲ್ಲಿ Click ಮಾಡಿ]. ಪ್ರತಿಯೊಂದು ಕ್ಷಣವೂ ನಾವು ಒಂದಿಲ್ಲ ಒಂದು ವಿಷಯದಲ್ಲಿ ನಮ್ಮನ್ನು ನಾವು ಮಗ್ನರನ್ನಾಗಿಸಿಕೊಳ್ಳುತ್ತೇವೆ, ಇಲ್ಲವಾದರೆ ನಮ್ಮ ಮನಸ್ಸು ಯಾವುದೋ ವಿಷಯವನ್ನು ಮೆಲುಕು ಹಾಕುತ್ತ ದೇಶದೇಶಾಂತರ ಸುತ್ತಾಡುತ್ತಿರುತ್ತದೆ. ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು. ಓದುತ್ತ ಓದುತ್ತ ಹೋದಂತೆ, ಯಾವುದೋ ಒಂದು ಶಕ್ತಿ ಥಟ್ಟನೆ ಬಂದು, ಒಂದೊಂದು ಬಗೆಯ ಭಾವನೆಗಳನ್ನು ಮೂಡಿಸಿ, ಆಶ್ಚರ್ಯಚಕಿತರನ್ನಾಗಿ ಮಾಡಿ, ಮರುಕ್ಷಣವೇ ಮಾಯವಾಗಬಹುದು. ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಯಾವುದೋ ಒಂದು ವಿಷಯ ಥಟ್ಟನೆ ಹೊಳೆದು ನಮ್ಮನ್ನು ಅತೀವ ಸಂತೋಷಕ್ಕೆ ಗುರಿಮಾಡುತ್ತದೆ. ಆ ಅನುಭವವನ್ನು ನೆನೆದರೆ ಮತ್ತೆ ಅದೇ ಥರದ ರೋಮಾಂಚನ ಸಿಗುವುದಿಲ್ಲ. ಆ ಅನುಭವವನ್ನು ಬೇರೊಬ್ಬದ ಜೊತೆ ಹಂಚಿಕೊಂಡು, ಅವರೂ ಆ ರೋಮಾಂಚನವನ್ನ ಅನಭವವಿಸುವಂತೆ ಮಾಡುವುದು ಹೇಗೆ? ಕೆಲವು ಭಾವನೆಗಳನ್ನು ಮನಸಾರೆ ಹಿಗ್ಗಿ, ನಲಿದು, ಅನುಭವಿಸಿದರೂ, ಅದನ್ನು ಮಾತಿನಲ್ಲಿ ಹೇಳುವುದು ನಮಗೆ ಎಷ್ಟೊಂದು ಕಠಿಣ! ಯಾಕೆ ಹೀಗೆ?

ಕಳೇದ ವಾರ, ಹುಡುಗಿ ಕೈಕೊಟ್ಟಳೆಂಬ ದುಃಖದಲ್ಲಿ ನನ್ನ ಸ್ನೇಹಿತ ಒಂದು ಹೊಸ ಕವನವನ್ನು ಬರೆದು ಕಳಿಸಿದ, ಅದು ಅವನೇ ಬರೆದಿದ್ದೋ ಅಥವ copy ಹೊಡಿದಿದ್ದೋ ಗೊತ್ತಿಲ್ಲ, ಹೀಗಿತ್ತು ಅದು....
"ಕಾದು ಕಾದು ಸುಣ್ಣವಾದೆ ನೀನು ಬರದ ಹಾದಿ ನೋಡಿ,
ಸುಸ್ತಾದೆ ತಿಳಿಸಿ ತಿಳಿಸಿ ತಿಳಿಗೇಡಿ ಮನಕೆ, ನೀನು ನನ್ನಾಕೆ ಅಲ್ಲ ಎಂದು,
ಆದರೂ ಮನದ ಯಾವುದೋ ಮೂಲೆಯಲ್ಲಿ ಹಣತೆ ಉರಿಯುತಿರುವುದು ಇಂದಿಗೂ ನೀನು ನನ್ನಾಕೆಯೆಂದು!"
ಹೀಗೆ ತಾನು ಇಷ್ಟಪಟ್ಟ ಹುಡುಗಿ ಕೈಕೊಟ್ಟಳಲ್ಲ ಅನ್ನೊ ವಿಷಯವನ್ನು ಪರಿಪರಿಯಾಗಿ ದುಃಖಿಸಿ, ನೊಂದುಕೊಂಡು, ತೋಡಿಕೊಳ್ಳಲು ಬೇರೆ ದಾರಿಯಿಲ್ಲದೇ ಹೋದಾಗ ಇಂತಹ ಅದ್ಭುತವಾದ ಕವನ ಅವನ ಮನಸ್ಸಿನಿಂದ ಹೊರಬಿತ್ತು!

ನೀವು ಅವನ ಕಷ್ಟವನ್ನು ನಿಮ್ಮದೇ ಆದ ಲೋಕದಲ್ಲಿ ಊಹಿಸಿದಿರಲ್ಲವೇ? ಅವನ ಕಷ್ಟ ಹೇಗಿರಬಹುದೆಂಬ ಒಂದು ಸಣ್ಣ ಚಿತ್ರಣ ನಿಮ್ಮಲ್ಲಿ ಮೂಡಿರಬಹುದಲ್ಲವೇ? ಕೊನೆ ಪಕ್ಷ, "ಛೆ! ಹೀಗಾಗಬಾರದಾಗಿತ್ತು" ಎಂಬ ಭಾವನೆಯಾದರೂ ನಿಮ್ಮಲ್ಲಿ ಮೂಡಿರಬೇಕಲ್ಲವೆ? ಹಾಗೆ ಆದರೆ, ಅವನ ಭಾವನೆಗಳು, ಅವನ ಕವನದ ಮೂಲಕ ನಿಮ್ಮಲ್ಲಿ ಸ್ವಲ್ಪವಾದರೂ ಮೂಡಿದಂತಾಗಲಿಲ್ಲವೇ? ಹೌದು! ಅದನ್ನೆ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ (The power of expressing your feelings) ಎನ್ನುವುದು. ನಮಗಾದ ಅನುಭವವನ್ನು ಪರಿಣಾಮಕಾರಿಯಾಗಿ ಹೇಳಲು ಎರಡು ದಾರಿಗಳಿವೆ.

ಒಂದು, ನಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ನಾವು ಯಾವುದೋ ವಸ್ತುವಿನೊಂದಿಗೆ ಹೋಲಿಸಿ (ಉದಾಹರಣೆಗೆ, ಮೇಲಿನ ಕವನವನ್ನೇ ತೆಗೆದುಕೊಳ್ಳಿ, "ಕಾದು ಕಾದು ಸುಣ್ಣವಾದೆ"), ಆ ಅನುಭವದ ಮಟ್ಟವನ್ನು (ಭಾವನೆಗಳ ತೀವ್ರತೆಯನ್ನು) ವ್ಯಕ್ತಪಡಿಸುತ್ತೇವೆ. ನನ್ನ ಗೆಳೆಯ ತನ್ನ ದುಃಖವನ್ನು ವ್ಯಕ್ತಪಡಿಸಲು ತನ್ನನ್ನು "ಸುಣ್ಣ"ಕ್ಕೆ ಹೋಲಿಸಿದ, ಅವನು ಕಾದು ಕಾದು ಪರಿತಪಿಸಿದ ರೀತಿಯನ್ನು ನೀವೇ ಚಿತ್ರಿಸಿಕೊಳ್ಳಬಹುದು. ಒಂದು ವೇಳೆ ನನ್ನ ಸ್ನೇಹಿತ ಕೇವಲ, "ಲೋ ಮಗಾ, ಅವಳು ಕೈ ಕೊಟ್ಟುಬಿಟ್ಟಳೋ!" ಅಂತ ಹೇಳಿದ್ದರೆ, ಅವನ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವೇ ಆಗುತ್ತಿರಲಿಲ್ಲ!

ಎರಡನೆಯದ್ದು, ನಾವು ಅನುಭವಿಸುವ ಭಾವನೆಗಳನ್ನು, ಮತ್ತೊಂದು ವಸ್ತುವಿನೊಂದಿಗೆ ಹೋಲಿಸದೇ, ಇದ್ದದ್ದನ್ನು ಇದ್ದಂತೆ ಅತ್ಯಂತ ಪರಿಣಾಮಕಾರಿಯಾಗಿ ಹೇಳುವುದು. ಇದರಲ್ಲಿ ಜಿ. ಪಿ. ರಾಜರತ್ನಂ (ನಮ್ಮ ರತ್ನ!) ಅವರದು ಎತ್ತಿದ ಕೈ. ನಮ್ಮ ರತ್ನ, ತನ್ನ ಮಡದಿಯ ನಗುವನ್ನು ಬಣ್ಣಿಸುತ್ತಾ, "ಮೂಗ ಆದಂಗ್ ಆಗ್ತೀನ್ ನಾನು ನನ್ ಪುಟ್ನಂಜಿ ನಕ್ರೆ!" ಎಂದಾಗ, ರತ್ನನ ಲೋಕದಲ್ಲಿ, ರತ್ನ ಏನೊ ಒಂದು ಬಣ್ಣಿಸಲಾಗದ ಅನುಭವಕ್ಕೆ ಗುರಿಯಾಗುತ್ತಾನೆ. "ಆಡ್ಬೇಕ್ ಅಂದ್ರೆ ಮಾತೆ ಸಿಕ್ದು ಉಕ್ಕ್ ಬರ್ತಿದ್ರೆ ಅಕ್ರೆ!", ನಂಜಿ ನಕ್ರೆ, ನಮ್ಮ ರತ್ನನಿಗೆ ಮಾತನಾಡಲು ಶಬ್ದಗಳೇ ಸಿಗುವುದಿಲ್ಲ! ನಂಜಿ (ನಿಜಜೀವನದಲ್ಲಿ ರತ್ನನ ಮಡದಿ ಲಲಿತಮ್ಮನವರು) ರತ್ನನನ್ನು ಅಗಲಿ ಹೋದಾಗ, ರತ್ನ ಹೇಳ್ತಾನೆ, "ಐನೋರ್ ಒಲ್ದಲ್ ಚಾಕ್ರಿ ಮಾಡ್ತ ಸಂಜಿ ಆಯ್ತಂದ್ರೆ, ಚಿಂತಿ ಮಾಡ್ತೀನ್ ಎಂಗಿರ್ತೈತೆ ನಂಜಿ ಎದ್ಬಂದ್ರೆ". ಯಜಮಾನರ ಹೊಲದಲ್ಲಿ ಕೂಲಿ ಮಾಡ್ತಾ ದಿನ ಕಳೆದು, ಸೂರ್ಯ ನಮ್ಮನ್ನಗಲುವ ಹೊತ್ತಿಗೆ, ನಮ್ಮ ರತ್ನ, ಒಂದು ವೇಳೆ ಅಗಲಿ ಹೋದ ನಂಜಿ ಮತ್ತೆ ಕಣ್ಮುಂದೆ ಬಂದರೆ ಹೇಗಿರುತ್ತೇ ಅನ್ನೋದನ್ನ ಮೆಲುಕು ಹಾಕುತ್ತಾನೆ. ಹೀಗೆ ಕೆಲವೇ ಕೆಲವು ಶಬ್ದಗಳಲ್ಲಿ, ರತ್ನ, ತಾನು ಅನುಭವಿಸಿದ ಭಾವನೆಗಳನ್ನು ನಾವೂ ಅನುಭವಿಸುವಂತೆ ಮಾಡಿಬಿಡುತ್ತಾನೆ! ಕೇವಲ ಕೆಲವೇ ಶಬ್ದಗಳು, ರತ್ನನ ಜೀವನ ಶೈಲಿಯನ್ನೇ ನಮ್ಮ ಕಣ್ಮುಂದಿಡುತ್ತವೆ. ರತ್ನ ಒಬ್ಬ ಕೂಲಿ ಆಳು ಎನ್ನುವುದು, ಅವನು ದಿನವಿಡೀ ಕಷ್ಟಪಡುವುದು, ನಂಜಿಯನ್ನು ಕಳೆದುಕೊಂಡದ್ದು, ಅವಳ ಬಗ್ಗೆ ಸದಾ ಕಾಲ ಚಿಂತಿಸುತ್ತಿರುವುದು, ಒಂದು ವೇಳೆ ನಂಜಿ ಮತ್ತೆ ತಮ್ಮ ಬದುಕಿನಲ್ಲಿ ಹೊಸದಾಗಿ ಬಂದರೆ ಹೇಗಿರುತ್ತದೆ ಎನ್ನುವುದು, ಹೀಗೆ ಹಲವಾರು ಅರ್ಥಗಳು ಒಂದೇ ಸಾಲಿನಲ್ಲಿ ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿಬಿಡುತ್ತವೆ.

ರತ್ನನ ಪದಗಳ ಕೆಲವು ತುಣುಕುಗಳನ್ನು ಗಮನಿಸಿ....

೧. "ಎಂಡ ಮುಟ್ದಾಗ್ಲೆಲ್ಲ ನಂಗೆ ಎನೋsssss ಕುಸಿ ಆಗ್ತೈತೆ......" (ಹೆಂಡ ಕುಡಿದಾಗ ರತ್ನನಿಗೆ ಆಗುವ ಸಂತಸ!)

೨. "ಇಂಗಿಂಗೆಂತ ಎಳೂಕಾಗ್ದು ನನ್‌ ಪುಟ್ನಂಜಿ ನಕ್ರೆ, ಸೀ ಅನ್ನೋದು ಸಬ್ದ ಮಾತ್ರ ತಿನ್ನೋಡ್ಬೇಕು ಸಕ್ರೆ!" (ಸಿಹಿ ಹೇಗಿರುತ್ತದೆ ಅನ್ನೋದನ್ನ ಬಾಯಲ್ಲಿ ಹೇಳೊಕ್ಕೆ ಹೇಗೆ ಆಗುವುದಿಲ್ಲವೋ, ಹಾಗೆಯೇ, ರತ್ನನ ನಂಜಿ ನಕ್ರೆ, ಅದು ಹೀಗೇ ಅಂತ ಹೇಳೊಕ್ಕಾಗಲ್ಲ!).

೩. ಹೆಂಡ (ಸಾರಯಿ), ಹೆಂಡತಿ, ಕನ್ನಡ ಪದಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ "ನಮ್ಮ ರತ್ನ", ಕನ್ನಡದ ಬಗ್ಗೆ ಹೀಗೆ ಹೇಳುತ್ತಾನೆ, "ನರ್ಕಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಹೊಲ್ಸಾಕಿದ್ರುನೇ, ಮೂಗ್ ನಲ್ ಕನ್ನಡ್ ಪದ್ವಾಡ್ತೀನಿ...." (ನರಕಕ್ಕೆ ಇಳಿಸಿ, ನಾಲಿಗೆ ಸೀಳಿಸಿ, ಬಾಯಿಯನ್ನು ಹೊಲಿಸಿದರೂ, ಮೂಗಿನಲ್ಲಿ ಕನ್ನಡ ಪದವಾಡುತ್ತೇನೆ), ಬಹುಷ ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಇಂತಹ ಹೃದಯಸ್ಪರ್ಷಿ "ಕನ್ನಡ ಅಭಿಮಾನ"ವನ್ನು ಯಾರೂ ಬಣ್ಣಿಸಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ನಮ್ಮ ರತ್ನನ ಪದಗಳನ್ನು (ಅದರಲ್ಲೂ, ಎಂಡ್ಕುಡುಕ ರತ್ನ ಒಂಬ ಪದವನ್ನು) ಓದಿ ಸಂತೋಷಪಡುವುದಕ್ಕಿಂತ, (ಒಂದು ಕಾಲದಲ್ಲಿ ಕುಡುಕರಾಗಿದ್ದ) ರಾಜು ಅನಂತಸ್ವಾಮಿಯವರ(ಮೈಸೂರು ಅನಂತಸ್ವಾಮಿಯವರ ಮಗ) ಹಾಡಿನ ಮೂಲಕ ಕೇಳಿದರೆ ಅದರ ಅನುಭವವೇ ಬೇರೆ. ರಾಜು ಅನಂತಸ್ವಾಮಿಯವರ "ಎಂಡ್ಕುಡುಕ ರತ್ನ"ನ ಪದಗಳನ್ನು ಕೇಳಿ ಪಟ್ಟ ಸಂತೋಷವನ್ನು ಈ ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ, ನಾನು ಪಟ್ಟ ಸಂತಸದ ಅನುಭವವನ್ನು, ಈ ಲೇಖನದ ಮೂಲಕ ನೀವೂ ಸಹ ಸ್ವಲ್ಪವಾದರೂ ಅನುಭವಿಸಿ, ನಮ್ಮ ರತ್ನ Excellenಟು! ಎಂದರೆ, ಬರೆದದ್ದಕ್ಕೆ ಸಾರ್ಥಕವಾಯಿತು ಎಂದುಕೊಳ್ಳುತ್ತೇನೆ!!!


------------------------------------------------------------------------------------
ರಾಜು ಅನಂತಸ್ವಾಮಿಯವರು ಹಾಡಿದ "ರತ್ನನ ಪದಗಳನ್ನು", ಈ ವಿಳಾಸಗಳ [೧. Hale beru hosa chiguru, p0697], [೨. Hale beru hosa chiguru, TK1043] ಮೂಲಕ ಪಡೆಯಬಹುದು.


ನಮ್ಮ ರತ್ನನ ಬಗ್ಗೆ ಆಸಕ್ತಿ ಇದ್ದರೆ ಕೆಳಗಿನ Linksಗೆ ಭೇಟಿ ಕೊಡಿ.....
೧. ಜಿ. ಪಿ. ರಾಜರತ್ನಂ ಅವರ ರತ್ನನ ಪದಗಳ online ಪುಸ್ತಕವನ್ನು ಇಲ್ಲಿ ಓದಬಹುದು.
೨. ಜಿ. ಪಿ. ರಾಜರತ್ನಂ ಅವರ ಬಗ್ಗೆ ಕನ್ನಡ ವಿಕಿಪೀಡಿಯ.
೩. thatskannada.com ಅಲ್ಲಿ ಜಿ. ಪಿ. ರಾಜರತ್ನಂ ಅವರ ಬಗ್ಗೆ ಲೇಖನ.

1 comment:

Manjunath Singe said...

ರಾಜರತ್ನಂ ಅವರ 'ಎಂಡ್ಕುಡುಕ ರತ್ನ'ನ ಪದಗಳನ್ನು ಕೆಳಗಿನ link ನಿಂದ ಕೇಳಬಹುದು.....
http://www.udbhava.com/usearch/search.spring?qs=rajaratnam&searchsubmit=Go&at=on&st=on&ly=on&md=on&ps=on&cat=0

Post a Comment

 

Creative Commons License
This work by Manjunath Singe is licensed under a Creative Commons Attribution-Noncommercial-No Derivative Works 2.5 India License. The views and opinions expressed in this work are strictly those of the author and do not represent his employer's views in anyway.