ಸಹಾನುಭೂತಿ (Compassion)

Tuesday, July 3, 2007

"ನಿನಗ್ಯಾಕೆ ನಾನ್ ಹೇಳಿದ್ದು ಅರ್ಥ ಆಗೊಲ್ಲ?", "ನಾನ್ ಹೇಳಿದ್ದನ್ನ ಸ್ವಲ್ಪನಾದ್ರು ಅರ್ಥ ಮಾಡ್ಕೊಳ್ಳೊಕೆ ಪ್ರಯತ್ನ ಪಡೊ", "ನನ್ನ ಜಾಗದಲ್ಲಿ ನೀನಿದ್ದಿದ್ರೆ ಏನ್ ಮಾಡ್ತಿದ್ದೀಯ?", ಇಂಥ ಪ್ರಶ್ನೆಗಳಿಗೆ ಮೂಲಭೂತ ಉತ್ತರ ಹುಡುಕುವ ಹುಚ್ಚು ಆಸೆ ಒಮ್ಮೆ ತೀವ್ರವೇ ಆಯತು. ಹುಡುಕುತ್ತ ಹೋದಾಗ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಂಡವು. ಯಾಕೆ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ಥರವಾಗಿರುತ್ತೆ? ಯಾಕೆ ನಾವು ಒಬ್ಬರ ಜೊತೆ ತುಂಬಾ ಹತ್ತಿರದಲ್ಲಿದ್ದು ಮತ್ತೊಬ್ಬರ ಜೊತೆ ಅಷ್ಟಕ್ಕಷ್ಟೆ ಇರುವುದು? relations ಕೆಟ್ಟ ದಾರಿಗೆ ಯಾಕೆ ಹೋಗುತ್ತವೆ? ಉತ್ತರ ಹುಡುಕುವುದು ಸಾಹಸದ ಕೆಲಸ ಅಂತ ಅರಿವಾದದ್ದಾಯಿತು. ಆದರೂ ಹುಡುಕುವ ಚಪಲ ಮಾತ್ರ ನನ್ನನ್ನು ಬಿಡಲಿಲ್ಲ. ಅಲ್ಪ ಸ್ವಲ್ಪ ಉತ್ತರ ಸಿಕ್ಕಿದ್ದುಂಟು.

"ಅವನ್ಯಾಕೊ ಅವತ್ತು ಹಂಗೆ ಹೇಳ್ಬಿಟ್ಟ?". "ಅಯ್ಯೊ ಬಿಡು ಮಹಾರಾಯ, ಅವನ ವ್ಯಕ್ತಿತ್ವನೇ ಅಂಥದ್ದು, ಯಾರೂ ಅವನನ್ನ change ಮಾಡೊಕ್ಕಾಗಲ್ಲ, ಅವನು ಬೆಳೆದಿದ್ದೇ ಅಂತಹ ಪರಿಸರದಲ್ಲಿ..." ಇಂತಹ ಉತ್ತರಗಳನ್ನು ಸರ್ವೇ ಸಾಮಾನ್ಯ ಎಲ್ಲರೂ ಕೇಳಿರುತ್ತಾರೆ. ಯಾಕೆ ಕೆಲವರು ಕೆಟ್ಟವರು, ಕೆಲವರು ಒಳ್ಳೆಯವರು ಅಂತ ಅನಿಸಿಕೊಳ್ಳುತ್ತಾರೆ?

ಮನುಷ್ಯ, ಪ್ರತಿಯೊಂದು ಸಂಧರ್ಭ ಅಥವ ಪರಿಸ್ಥಿತಿಯಿಂದ ಅನೇಕ ಅನುಭವಗಳನ್ನು ಪಡೆಯುತ್ತಾನೆ, ಹುಟ್ಟಿದಾಗಿನಿಂದ ಇಂಥ ಅನುಭವಗಳ ಪರಿಣಾಮದಿಂದ ತನ್ನದೇ ಆದ ಒಂದು ಮಾನಸಿಕ ಪರಿಸರವನ್ನು (mindset ಅನ್ನಬಹುದು) ನಿರ್ಮಿಸಿಕೊಳ್ಳುತ್ತಾನೆ. ಆ ಮನಸಿಕ ಪರಿಸರ ತುಂಬ ಗಾಢವಾದದ್ದು. ಏಕೆಂದರೆ ಇಡೀ ಜೀವನದ ಅನುಭವಗಳು, ಜೇಡರ ಬಲೆಯಂತೆ ಒಂದಕ್ಕೊಂದು ಹಣೆದುಕೊಂಡು, ಒಂದು ವಿಶಿಷ್ಟವಾದ ವ್ಯಕ್ತಿತ್ವವನ್ನು ಕೊಡುತ್ತವೆ. ಆ ವ್ಯಕ್ತಿತ್ವ ಪ್ರತಿಯೊಂದು ಸಂಧರ್ಭಕ್ಕೆ ತಕ್ಕಂತೆ, ನಮ್ಮ ಪರಿವಿಲ್ಲದೆ (unconsciously) ಪ್ರತಿಕ್ರಿಯೆ ನೀಡುತ್ತದೆ. ಒಂದೇ ಪ್ರಶ್ನೆಯನ್ನು ಹಲವರಿಗೆ ಒಡ್ಡಿದಾಗ, ಪ್ರತಿಯೊಬ್ಬರದೂ ಒಂದೊಂದು ಅಭಿಪ್ರಾಯ. ಆ ವ್ಯಕ್ತಿತ್ವವೇ ಪ್ರತಿಯೊಬ್ಬನ ಗುಣಾವಗುಣಗಳನ್ನು ನಿರೂಪಿಸುತ್ತವೆ. ಆದ್ದರಿಂದ, ಯಾವುದೇ ವ್ಯಕ್ತಿ ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡುವಾಗ, ಅವನ ಒಂದು ಮಾನಸಿಕ ಪರಿಸರ ಅವನನ್ನು ಒಂದು ನಿರ್ದಿಷ್ಟವಾದ ಅಭಿಪ್ರಾಯವನ್ನು ಕೈಗೊಳ್ಳುವಂತೆ ಮಾಡಿಬಿಡುತ್ತದೆ. ಅಂದರೆ ಅವನ ಮಾನಸಿಕ ಪರಿಸರವೇ ಆ ಅಭಿಪ್ರಾಯದ ಬೆನ್ನೆಲುಬು ಎಂದಂತಾಯಿತು. ಪ್ರತಿಕ್ರಿಯೆ ಒಳ್ಳೆಯದಾಗಿರಲಿ, ಕೆಟ್ಟದ್ದಾಗಿರಲಿ, ಅದು ಅವನದಲ್ಲ; ಅವನ ಹಿಂದಿನ ಅನುಭವಗಳ ಪರಿಣಾಮವೇ? ಆ ಹಿಂದಿನ ಅನುಭವಗಳೇ ನಮ್ಮನ್ನು ನಿಯಂತ್ರಿಸುತ್ತವೆ ಎಂದರೆ ಸ್ವಲ್ಪ ತಪ್ಪಾಗಬಹುದು. ಏಕೆಂದರೆ, ಮನಶ್ಯಕ್ತಿ (willpower) ಅವನ ನಿರ್ಧಾರಗಳನ್ನು ನಿಯಂತ್ರಿಸಬಹುದು. ಆದರೆ ಆ ಮನಶ್ಯಕ್ತಿ ಎಲ್ಲಿಂದ ಬರುತ್ತದೆ? ಅವನ ಮಾನಸಿಕ ನಿಲುವಿನಿಂದ ತಾನೆ(ಉದಾ: ನಾನು ಅದನ್ನು ಮಾಡಲೇ ಬೇಕೆಂಬ ಹಠ)? ಆ ಮಾನಸಿಕ ನಿಲುವು ಅವನ ಮಾನಸಿಕ ಪರಿಸರದ(mindset ನ) ಪರಿಣಾಮವಲ್ಲವೇ? ಹೌದು ಅನಿಸುತ್ತದೆ. ಇಲ್ಲದಿದ್ದರೆ ಆ ನಿರ್ಧಾರಗಳ ಅಥವ ಅಭಿಪ್ರಾಯಗಳ ತಳ ಬುಡ ಸಿಕ್ಕುವುದೇ ಕಷ್ಟ. ಆದ್ದರಿಂದ ಹುಟ್ಟಿನಿಂದ ಯಾರೂ ಕೆಟ್ಟವರಿಲ್ಲ, ಅವರು ಜೀವನಪರ್ಯಂತ ಪಡೆದುಕೊಂಡ ಅನುಭವಗಳು ಅವರನ್ನು ಒಂದು ವಿಶಿಷ್ಟ ವ್ಯಕ್ತಿತ್ವಕ್ಕೆ ಗುರಿಪಡಿಸುತ್ತವೆ ಅನಿಸುವುದಿಲ್ಲವೇ?

ಆದ್ದರಿಂದ ಯಾವುದೇ ವ್ಯಕ್ತಿಯನ್ನು ಒಳ್ಳೆಯವನು ಅಥವ ಕೆಟ್ಟವನು ಎನ್ನುವುದಕ್ಕಿಂತ ಮುಂಚೆ ಆ ವ್ಯಕ್ತಿಯ ಮಾನಸಿಕ ಪರಿಸರವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಯಾರೂ ಯಾವ ದೃಷ್ಟಿಯಲ್ಲಿ ನೋಡಿದರೂ ಕೆಟ್ಟವರಾಗಲಾರರು. ಏಕೆಂದರೆ ಯಾವುದೇ ವ್ಯಕ್ತಿ ಬೆಳೆದು ಬಂದ ದಾರಿ, ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುತ್ತದೆ. ಆದ್ದರಿಂದ ಅವರವರ ದೃಷ್ಟಿಯಲ್ಲಿ ಅವರವರು ಒಳ್ಳೆಯವರೆ! ನಮ್ಮ ದೃಷ್ಟಿಯಲ್ಲಿ ಅವರು ನಾವಂದುಕೊಳ್ಳುವ ರೀತಿಯಲ್ಲಿರಬಹುದು, ಆದರೆ ನಮ್ಮ ಅಭಿಪ್ರಾಯ ನಮ್ಮ ಮಾನಸಿಕ ಪರಿಸರವನ್ನು ಅವಲಂಬಿಸಿರುವುದಿಲ್ಲವೇ? ಆದ್ದರಿಂದ ಮತ್ತೊಬ್ಬರನ್ನು ಕರುಣೆಯಿಂದ ನೋಡಿ, ಅವರಿದ್ದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅವರ ಮನಸ್ಸಿನ ಅಂತರಾಳಕ್ಕಿಳಿದು, ಅವರ ಮನಸ್ಸು ಹೇಗೆ ಎಂದು ತಿಳಿದುಕೊಂಡಾಗ ಯಾರೂ ಯಾರಿಗೂ ಕೆಟ್ಟವರಾಗಲಾರರು! ನಿಮ್ಮ ದೃಷ್ಟಿಯಲ್ಲಿ ಯಾರದರು "ಕೆಟ್ಟವರು" ಎನಿಸಿಕೊಂಡಿದ್ದರೆ, ಅವರನ್ನು ಒಂದು ಸಲ ಹೃತ್ಪೂರ್ವಕವಾಗಿ, ನಿಸ್ಷಕ್ಷಪಾತದಿಂದ ಮಾತನಾಡಿಸಿ ನೋಡಿ, ಯಾರು ಯಾರಿಗೆ ಕೆಟ್ಟರೆನ್ನುವುದು ಗೊತ್ತಾಗುತ್ತದೆ! ಆ ನಿಸ್ಷಕ್ಷಪಾತದ ದೃಷ್ಟಿ ಮತ್ತೊಬ್ಬರನ್ನು ಅನುಕಂಪದಿಂದ ನೋಡುವಂತೆ ಮಾಡಬಹುದು. ನಿದರ್ಶನಕ್ಕೆ ಮೈಕಲ್ ವುಡ್'ರ ಹೇಳಿಕೆಯನ್ನು ಗಮನಿಸಿ: "One character that distinguish 'Akbar - The Great' from other kings is, his ability to speak to any person of any rank with the same eye of help" (ಅಕ್ಬರ್ ಬಿಟ್ಟರೆ ಬೇರಾವ ರಾಜರುಗಳಲ್ಲಿ ಸಿಗದ ಒಂದು ಗುಣವೆಂದರೆ, ಯಾವುದೇ ದರ್ಜೆಯ ವ್ಯಕ್ತಿಯೊಂದಿಗೆ, ಒಂದೇ ದೃಷ್ಟಿಯ ಕರುಣೆಯಿಂದ ಮಾತನಾಡಿಸುವ ಒಂದು ಸಾಮರ್ಥ್ಯ)[Michael Wood, British Historian, Origins of civilization-INDIA-the empire of spirit 4-6, "www.youtube.com/watch?v=wEXcoyBy1oY"].

ನನಗನಿಸಿದ ಮಟ್ಟಿಗೆ ಆ ಸಾಮರ್ಥ್ಯವನ್ನೇ ಸಹಾನುಭೂತಿ (Compassion) ಎನ್ನಬಹುದು. ಪ್ರತಿಯೊಬ್ಬರೂ ತಮ್ಮ ಜೀವಮಾನದಲ್ಲಾದ ಅನುಭವಗಳ ಮೇಲೆ ತಮ್ಮದೇ ಆದ ಒಂದು "ಪರಿಸರ"ವನ್ನು (mindset) ನಿರ್ಮಿಸಿಕೊಂಡಿರುತ್ತಾರೆ. ಆದರೆ ಮಾನಸಿಕ ಪರಿಸರ ಬದಲಾಗವದಿಲ್ಲವೆಂದು ಅರ್ಥವಲ್ಲ. ಆ ಮಾನಸಿಕ ಪರಿಸರವೇ ನಮ್ಮನ್ನು ಎಲ್ಲಾ ಕಾಲದಲ್ಲಿ ಎಲ್ಲಾ ರೀತಿಯ ನಿರ್ಧಾರಳಿಗೆ ಕಾರಣವೆಂಬುದೂ ನನ್ನ ವಾದವಲ್ಲ. ಪೃಕೃತಿ ಮಾನವನಿಗೆ ಎಂತಹ ಶಕ್ತಿ ಕೊಟ್ಟಿದೆ ಎಂದರೆ, ಅವನ ಮಾನಸಿಕ ನಿಲುವು ಎಂತಹದೇ ಆಗಿರಲಿ, ಪರಿಸ್ಥಿತಿಯ ಒತ್ತಡ ತೀವ್ರವಾಗಿದ್ದರೆ ನಮ್ಮ ನಂಬಿಕೆಯ ವ್ಯವಸ್ಥೆಯ(Belief System)ನ್ನೇ ತಲೆ ಕೆಳಗಾಗಿ ಮಾಡಬಹುದು. ಆದರೂ ಮತ್ತೊಬ್ಬರ ಮಾನಸಿಕ ಪರಿಸರವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಹಾನಭೂತಿ (Compassion) ಅತ್ಯವಶ್ಯಕ ಅನಿಸುತ್ತದೆ. ಅದೊಂದಿದ್ದರೆ ಸಾಕು, ಈ ಲೇಖನದ ಪ್ರಾರಂದಲ್ಲಿನ ಎಲ್ಲ ಪ್ರಶ್ನೆಗಳಿಗೆ ಮೂಲಭೂತವಾದ (Fundamental) ಉತ್ತರ ಹುಡುಕುವುದು ಕಷ್ಟವೇನಲ್ಲ ಅನಿಸುತ್ತದೆ.

4 comments:

Post a Comment

 

Creative Commons License
This work by Manjunath Singe is licensed under a Creative Commons Attribution-Noncommercial-No Derivative Works 2.5 India License. The views and opinions expressed in this work are strictly those of the author and do not represent his employer's views in anyway.