ಅಂಧಕಾರವೋ , ಅವಿವೇಕವೋ?

Wednesday, July 25, 2007

"ಬೆಳಿಗ್ಗೆ ಬೆಳಿಗ್ಗೆನೆ ಯಾವನ್ ಮುಖ ನೋಡಿದ್ನೋ ಏನೊ, ಅದಕ್ಕೆ ಹಿಂಗ್ ಆಗ್ತಾ ಇದೆ", "ಇವತ್ time ಸರಿ ಇಲ್ಲ, ಆ ಕೆಲಸ ಇವತ್ ಬೇಡ", "ದಿನಾ ಬೆಳಿಗ್ಗೆ ಬಲಗಡೆಯಿಂದನೇ ಏಳ್ಬೇಕು" ಇಂತಹ ಅನೇಕ ಆಧಾರವಿಲ್ಲದ ದೂರುಗಳನ್ನು ಕೇಳಿರಬಹುದು. ಕೆಲವು ಸಲ ಮನೆಯಲ್ಲಿನ ಹಿರಿಯರು, ಮಗು ಎಡಗಡೆಯಿಂದ ಏಳುವುದನ್ನು ನೋಡಿದರೆ, ಆ ಮಗುವನ್ನು ಮತ್ತೆ ಮಲಗಿಸಿ, ಬಲಗಡೆಯಿಂದ ಎಬ್ಬಿಸಿದ್ದನ್ನು ನಾನು ಕೇಳಿದ್ದೇನೆ! ದಿನಾ ಪತ್ರಿಕೆಗಳಲ್ಲಿ ಅಂದಂದಿನ ಭವಿಷ್ಯ ನೋಡ್ಕೊಂಡೇ ಮುಂದಿನ ಕೆಲಸ ಮಾಡೋರು ಇದಾರೆ. ನಿಮ್ಮ ಅನುಭವದಲ್ಲಿ ಅಂತಹ ಭವಿಷ್ಯವಾಣಿ ನಿಜವಾಗಿದ್ದೇನಾದರು ಉಂಟೆ? ಯಾವನದೋ "ಅರಿಷ್ಟ" ಮುಖ ನೋಡಿ ಕೆಲಸ ಕೆಟ್ಟಿದ್ದು ಉಂಟೆ? ನನ್ನ ಜೀವನದಲ್ಲಿ ಇಂತಹ ಅನೇಕ ಸಂಗತಿಗಳು ನಿಜವಾಗಿದ್ದುಂಟು! ಹಾಗೆ ನಡೆದುಕೊಳ್ಳದಿದ್ದರೆ ಏನಾದೀತೆಂದು ತಿಳಿದುಕೊಳ್ಳುವ ಹುಚ್ಚಿನಿಂದ, ದಿನಾ ಬೆಳಿಗ್ಗೆ ಎಡಗಡೆಯಿಂದಾನೇ ಏಳಬೇಕು ಎಂಬ ಮೊದಲ ಹೆಜ್ಜೆಯನ್ನಿಟ್ಟೆ. ಕಳೆದ ಆರೇಳು ತಿಂಗಳಿಂದ ಎಡಗಡೆಯಿಂದಾನೇ ಏಳುತ್ತಿದ್ದೇನೆ! ವಿಷಾದಕರ ಘಟನೆಗಳಿಗಿಂತ, ಅತೀವ ಸಂತಸ ತಂದ ದಿನಗಳೇ ಹೆಚ್ಚು!

ಯಾವುದೇ ವಸ್ತುವನ್ನು, ವ್ಯಕ್ತಿಯನ್ನು, ವಿಶಯವನ್ನು, ನಿಸ್ಪಕ್ಷಪಾತವಾಗಿ, ಸಹಾನುಭೂತಿ ಮತ್ತು ವಿವೇಚನೆಯಿಂದ ನೋಡಿ ನಿರ್ಧಾರ ಕೈಗೊಂಡರೆ, ಕಣ್ಮುಂದಿನ ಸಮಾಜವೇ ಕೆಲವು ಬಾರಿ ಸ್ವರ್ಗವಾಗಬಹುದು. ಆದರೆ ಅಂಧಶ್ರದ್ಧೆ ಮನುಶ್ಯನನ್ನು ಎಂತಹ ಪರಿಸ್ಥಿತಿಗೆ ಗುರಿಪಡಿಸಬಹುದೆಂಬ ಅರಿವಾದದ್ದು ಮೊನ್ನೆ ಮೊನ್ನೆ ಮಾತ್ರ. ಸ್ವಲ್ಪ ದಿನಗಳ ಹಿಂದೆ ನಾನೊಂದು ಹಳ್ಳಿಗೆ ಹೋಗಿದ್ದೆ. ಮಕ್ಕಳಿದ್ದರೂ ಅನಥಳಾದ ವ್ರದ್ಧೆಯೊಬ್ಬಳು, ಆಶ್ರಯಕ್ಕಾಗಿ ಹಳ್ಳಿಯ ಹಲವರನ್ನು ಅಂಗಲಾಚಿದರೂ ಪ್ರಯೋಜನವಿಲ್ಲದ ಪರಿಸ್ಥಿತಿ ಹೃದಯವಿದ್ರಾವಕವಾಗಿತ್ತು. ಕಾರಣ ಇಷ್ಟೆ, ಅವಳೊಬ್ಬ ತೊಂಬತ್ತು ಮೀರಿದ "ದೇವದಾಸಿ" ವ್ರದ್ಧೆ, ರಾತ್ರಿ ಯಾರ ಮನೆಯಲ್ಲಾದರೂ ಆಶ್ರಯಿಸಿ ಅಲ್ಲೇ ಅಸುನೀಗಿದರೆ ಅವಳ "ಪಾಪ" ಮನೆಯವರಿಗೆ ತಟ್ಟೀತೆಂಬ ಅಂಧ ನಂಬಿಕೆ! ಮನೆ-ಮಠ, ತನ್ನವರೆನ್ನುವವರು ಯಾರೂ ಇಲ್ಲದ ಆ ವ್ರದ್ಧೆ ಜೀವಂತ ಶವದಂತೆ. ನನ್ನಿಂದಾದ ಸಹಾಯ ಮಾಡಿದೆ, ಆದರೆ ಅದು ಅವಳಿಗೆ ಎಷ್ಟು ದಿನ ಆಧಾರವಾದೀತು? ಇದರ ಬಗ್ಗೆ ಹಲವರನ್ನು ಹಾಗಲ್ಲ, ಇದು ಹೀಗೆ, ಅದು ಸರಿಯಲ್ಲ, ಇದು ಸರಿಯಾದ ದಾರಿ ಎಂದು ನೂರಾರು ವಾದಗಳಿಂದ ಮನಸ್ಸನ್ನು ಪರಿವರ್ತಿಸಲು ಪ್ರಯತ್ನ ಪಟ್ಟೆ, ಅವರಿಂದ ಹೂಂ ಎನಿಸಿಕೊಂಡದ್ದೂ ಆಯಿತು. ಆದರೆ ಮರುದಿನ ಎತ್ತು ಏರಿಗೆ ಕೋಣ ನೀರಿಗೆ ಎನ್ನುವಂತಾಗಿತ್ತು ನನ್ನ ಪ್ರಯತ್ನ. ಅವರ ಆ ನಂಬಿಕೆ ಅಂಧಕಾರವೋ , ಅವಿವೇಕವೋ ತಿಳಿಯದು.

ಇಂತಹ ನಂಬಿಕೆಗಳು ಅಂತರಾಳದಲ್ಲಿನ ನಿಂತ ನೀರಿನಂತೆ. ಹೊರಗೆಡವಲು ಹೋದರೆ ಏನೋ ಕಳೆದುಕೊಳ್ಳುತ್ತೇನಲ್ಲ ಎಂಬ ಭಯ ಕೆಲವರಿಗೆ! ಅಂಧಶ್ರದ್ಧೆಯ ಅಥವ ಮೂಢಭಕ್ತಿಯ (irrational) ವಿಚಾರಗಳು ಎಷ್ಟೋ ಬಾರಿ ನಮ್ಮನ್ನು ಸಹಿಸಲಾರದ ತೊಂದರೆಗಳಿ ಗುರಿಪಡಿಸಬಹುದು. ಹದಿನೆಂಟನೇ ಶತಮಾನದ ರಾಜಾರಮ್ ಮೋಹನ್ ರಾಯ್ರ ಕಾಲದಿಂದಲೂ "ವಿವೇಚನಾಧಾರಿತ ವಿಚಾರಗಳ (rational thinking)" ಬಗ್ಗೆ ಸಾವಿರಾರು ಲೇಖನಗಳು, ಭಾಷಣಗಳು, ಪುಸ್ತಕಗಳು ಬಂದಿದ್ದರು, ಜನರ ಮನದಾಳದಲ್ಲಿ ಹುದುಗಿದ ಮೂಢನಂಬಿಕೆಗಳ / ಢಾಂಬಿಕತೆಯ ಬೇರುಗಳು ಇನ್ನು ಸಂಪೂರ್ಣವಾಗಿ ಅಳಿದು ಹೋಗಿಲ್ಲ. ಇಂತಹ ಅಂಧಕಾರಗಳನ್ನು ಹೊಡಿದೆಬ್ಬಿಸುವ ಪ್ರಯತ್ನ ಹೊಸದೇನಲ್ಲ, ಇತಿಹಾಸದ ಅನೇಕ ಮಹನೀಯರು ಇದರ ಬಗ್ಗೆ ಜೀವನ ಪರ್ಯಂತ ಹೋರಡಿದ್ದಾರೆ. ಜ್ಯೋತಿಬಾ ಫುಲೆ, ಈಶ್ವರ ಚಂದ್ರ ವಿದ್ಯಾಸಾಗರ, ದೇವೇಂದ್ರನಥ ಠಾಗೋರ್, ಮದನ ಮೋಹನ ಮಾಳವೀಯರಂತಹ ಸಹಸ್ರಾರು ಗಣ್ಯರು ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿಲ್ಲ. ಹನ್ನೆರಡನೇ ಶತಮಾನದಲ್ಲೇ, ಮಾದಿಗರ ಹರಳಯ್ಯ ಮತ್ತು ಬ್ರಾಹ್ಮಣರ ಮಧುವಯ್ಯರ ನಡುವೆ ಸಂಭಂದ ಬೆಳೆಸಲು ಪ್ರಯತ್ನ ಪಟ್ಟ ಬಸವಣ್ಣನವರು ನಮ್ಮ ಕಾಲದವರಿಗಿಂತ 800 ವರ್ಷ ಮುಂದಿದ್ದರು ಎನಿಸುತ್ತದೆ! ಇಂತಹ ಪರಿಸ್ಥಿತಿಗೆ ಪೂರ್ಣವಿರಾಮ ಇಲ್ಲವೇ ಎನ್ನುವ ಬಲುದೊಡ್ಡ ಪ್ರಶ್ನೆ ನನ್ನಂತೆ ಎಲ್ಲರನ್ನೂ ಕಾಡುತ್ತಿರಬಹುದು. ಆದರೆ ಎಲ್ಲಿಯವರೆಗೆ ನಾವೆಲ್ಲರೂ ಅಂಧನಂಬಿಕೆಗಳನ್ನು ಪ್ರಶ್ನಿಸುವುದಿಲ್ಲವೋ ಬಹುಶಃ ಅವು ಅನಂತ ಕಾಲದವರೆಗೆ ಉಳಿಯಬಹುದು. ತುಂಬ idealistic ಆಗಿ ತೋರಬಹುದು ನನ್ನ ವಿಚಾರ. ಆದರೆ ಅಟ್ಟವನೇರುವುದಕ್ಕ ನಿಚ್ಚಣಿಕೆಯೇ ಸೋಪಾನವೆನ್ನುವ ಮಾತು ನೆನಪಾಗುವುದಿಲ್ಲವೇ? ನಿಚ್ಚಣಿಕೆಯ ಪ್ರತಿಯೊಂದು ಮೆಟ್ಟಿಲಿನಂತೆ, ನಮ್ಮ ಜೀವನಲ್ಲಿ ಎಲ್ಲರೂ, ಮೂಢಭಕ್ತಿಯನ್ನು ಮೂಲಭೂತವಾಗಿ ಪ್ರಶ್ನಿಸಿದರೆ (The fundamental questions to the irrational thinking), ಅಟ್ಟವನೇರುವುದು ಅಸಾಧ್ಯವೇನಲ್ಲ. ಅರ್ಥವಿಷ್ಟೇ, ಶ್ರದ್ಧೆಯನ್ನು ಪುರಸ್ಕರಿಸಿ, ಆದರೆ ಅವಿವೇಕದ ಶ್ರದ್ಧೆಯನ್ನು ಸದಾ ತಿರಸ್ಕರಿಸಿರಿ.

No comments:

Post a Comment

 

Creative Commons License
This work by Manjunath Singe is licensed under a Creative Commons Attribution-Noncommercial-No Derivative Works 2.5 India License. The views and opinions expressed in this work are strictly those of the author and do not represent his employer's views in anyway.