ಸ್ಪೂರ್ತಿ

Tuesday, June 12, 2007

ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು. ಓದುತ್ತ ಓದುತ್ತ ಹೋದಂತೆ, ಯಾವುದೋ ಒಂದು ಶಕ್ತಿ ಥಟ್ಟನೆ ಬಂದು, ಒಂದೊಂದು ಬಗೆಯ ಭಾವನೆಗಳನ್ನು ಮೂಡಿಸಿ, ಆಶ್ಚರ್ಯಚಕಿತರನ್ನಾಗಿ ಮಾಡಿ, ಮರುಕ್ಷಣವೇ ಮಾಯವಾಗಬಹುದು. ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಯಾವುದೋ ಒಂದು ವಿಷಯ ಥಟ್ಟನೆ ಹೊಳೆದು ನಮ್ಮನ್ನು ಅತೀವ ಸಂತೋಷಕ್ಕೆ ಗುರಿಮಾಡುತ್ತದೆ. ಆ ಅನುಭವವನ್ನು ನೆನೆದರೆ ಮತ್ತೆ ಅದೇ ಥರದ ರೋಮಾಂಚನ ಸಿಗುವುದಿಲ್ಲ.

ಸಾಮಾನ್ಯ ಸಂಗತಿಯನ್ನೇ ತೆಗೆದುಕೊಳ್ಳಿ. ಸಮುದ್ರದ ತೀರದಲ್ಲಿ ಕುಳಿತು ಸೂರ್ಯಸ್ತವನ್ನು ವೀಕ್ಷಿಸುತ್ತಿರುವಾಗ, ಕೆಂಪಾದ ಸೂರ್ಯನ ಮಧ್ಯ ಥಟ್ಟನೆ ಒಂದು ಹಕ್ಕಿ ಬಂದಾಗ ನಮಗೊದಗುವ ಆನಂದ, ಮತ್ತೆ ನೆನೆಸಿಕೊ೦ಡರೆ ಸಿಗದು. ಆ ಒಂದು ಕ್ಷಣದಲ್ಲಿ, ಅಯ್ಯೋ ಒಂದು ಕ್ಯಾಮರ ಇರಬೇಕಾಗಿತ್ತಲ್ಲ ಎನಿಸುತ್ತದೆ. ಒಂದು ವೇಳೆ ಕ್ಯಾಮೆರ ತೆಗೆದುಕೊಂಡು ಹೋದಾಗ ಎಲ್ಲಿಯೂ ಒಂದು ಹಕ್ಕಿ ಕೂಡ ಕಾಣಿಸುವುದಿಲ್ಲ, ಕಂಡರೂ ಅದು, ಕೆಂಪಾಗಿ, ದುಂಡಾಗಿರುವ ಸೂರ್ಯನ ಮಧ್ಯ ಬರುವುದೇ ಇಲ್ಲ! ಒಂದು ವೇಳೆ ಬಂದರೂ ಮೊದಲಾದ ಅನುಭವಕ್ಕೊ, ಈಗಾಗುವ ಅನುಭವಕ್ಕೂ ಎಷ್ಟೊಂದು ವ್ಯತ್ಯಾಸ!!

ಯಾವ ಶಕ್ತಿ ಈ ಅನುಭವಕ್ಕೆ ಕಾರಣ?? ಸ್ಪೂರ್ತಿ (Inspiration)! ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಎಲ್ಲೋ ಹುದುಗಿಕೊಂಡಿದ್ದ ಒಂದು ಅಮೂರ್ತ ಶಕ್ತಿ ಪುಟಿದೆದ್ದು, ನಮ್ಮನ್ನು ವರ್ಣಿಸಲಾಗದೊಂದು ಅನುಭವಕ್ಕೆ ಗುರಿಮಾಡಿಬಿಡುತ್ತದೆ. ಆ ಪರಿಸ್ಥಿತಿಯಲ್ಲಿದ್ದ ಆವೇಶ, ಉತ್ಸಾಹ ಮತ್ತೆ ಯಾಕೆ ಬರುವುದಿಲ್ಲ? ಅದೇ ಸ್ಪೂರ್ತಿಯ ಮಹಿಮೆ. ಆವೇಶ, ಉತ್ಸಾಹವೇ ಅದರ ಮೂಲ. ಅಂಥ ಆವೇಶ, ಉತ್ಸಾಹಗಳನ್ನು ಪ್ರಯತ್ನಪೂರ್ವಕವಾಗಿ ಸೆರೆಹಿಡಿಯಬಹುದೇ? ಕೆಲವರಿಗೆ ಒಂದು ಸಿಗರೇಟ್ ಎಳೆದರೆ ಸಾಕು recharge ಆಗಿ ಬಿಡುತ್ತಾರೆ. ಕೆಲವರು ತಮಗೆ ಪ್ರಿಯವಾಗಿದ್ದವರ ಜೊತೆ ಮಾತನಾಡಿದರೆ ಸಾಕು ಹಸನ್ಮುಖಿಗಳಾಗಿಬಿಡುತ್ತಾರೆ. ಕೆಲವರು ನಿಸರ್ಗದ ಯಾವುದಾದರೊಂದು ರೂಪವನ್ನು ಕಂಡರೆ ಸಾಕು ಉತ್ಸಾಹಿಗಳಾಗಿಬಿಡುತ್ತಾರೆ. ಇದಕ್ಕೆಲ್ಲ ಏನು ಕಾರಣ? ಯಾಕೆ ಹೀಗೆ? ಇಂಥಹ ಪ್ರಶ್ನೆಗಳಿಗೆ ಖಚಿತವಾದ ಉತ್ತರಗಳಿಲ್ಲ. ಸೃಷ್ಟಿಕರ್ತನೇ ಆ ಭಾವನೆಗಳ ನಿರ್ಮಾಪಕ. ನಮ್ಮ ಸುತ್ತ ಮುತ್ತಲಿನ ವಸ್ತುಗಳು, ಅನುಭವಗಳು, ಘಟನೆಗಳು ಆ ಸ್ಪೂರ್ತಿಯ ನಿರ್ಮಿತಿಗೆ ಸಾಮಾಗ್ರಿಗಳಷ್ಟೆ.

ಸ್ಪೂರ್ತಿ ಇಲ್ಲದ ಮನಸ್ಸು ಯಾವುದೋ ಒಂದು ವಿಷಯದ ಕುರಿತು, ದೇಶದೇಶಾಂತರಗಳನ್ನು ಸುತ್ತುತ್ತಾ, ದುಃಖಲ್ಲಿ ಕೊರಗುತ್ತಿರಲೂ ಬಹುದು. ಥಟ್ಟನೇ ಏನೋ ಹೊಳೆದು, wow! ಇದು ಇಷ್ಟೊಂದು easy ಇದೆಯೆಂದು ಗೊತ್ತೇ ಇರಲಿಲ್ಲ ಎನ್ನಲೂ ಬಹುದು. ಹೀಗೆ ಉದಾಹರಣೆಗಳನ್ನು ಮೆಲುಕಿಸುತ್ತಾ ಎಷ್ಟೇ ದೂರ ಹೋದರೂ, ಸ್ಪೂರ್ತಿ ಎಲ್ಲಿ, ಹೇಗೆ, ಯಾವಾಗ ಚಿಮ್ಮುತ್ತದೆಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

3 comments:

Kiran ಸಾಗರ್ said...
This comment has been removed by the author.
Kiran ಸಾಗರ್ said...

after reading ur blog...ಒಮ್ಮೆಲೆ ಏನಾದ್ರು ಬರಿಬೇಕು ಅನುಸ್ತಾ ಇದೆ..so, take it :)

"ಸ್ಪೂರ್ತಿ"

ಅದು ಯಾವ ರೂಪದಲಿ ಬರುವುದೋ ತಿಳಿಯೆನು
ಇನ್ಯಾವ ರೂಪಕೆ ತಿರುಗುವುದೋ ಕಾಣೆನು...
ನಮ್ಮ ಮನಸಿನಲ್ಲೇ ಆಗುವುದಿದರ ಜನನ
ಸ್ಪೂರ್ತಿಯು ಬಾಳ ಗೆಲುವಿನ ಸೋಪಾನ..

Manjunath Singe said...

ಸಕ್ಕತಾಗಿದೆ ಮಗಾ!! ಸಾರ್ಥಕವಾಯಿತು "ಸ್ಪೂರ್ತಿ" ಬರೆದಿದ್ದಕ್ಕೆ.

Post a Comment

 

Creative Commons License
This work by Manjunath Singe is licensed under a Creative Commons Attribution-Noncommercial-No Derivative Works 2.5 India License. The views and opinions expressed in this work are strictly those of the author and do not represent his employer's views in anyway.